

ಹಾವೇರಿ: ತನ್ನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಬೇರೆಯವರೊಂದಿಗೆ ಮದುವೆಯಾಗುವ ವಿಷಯ ತಿಳಿದು ಆ ವ್ಯಕ್ತಿಯನ್ನು ಕೊಲೆ ಮಾಡಿದ್ದ ಮಹಿಳೆಗೆ ಜೀವಾವಧಿ ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಗುರುವಾರ ತೀರ್ಪು ನೀಡಿದ್ದಾರೆ.
ಎಲ್ಲವ್ವ ಹೊಸಳ್ಳಿ ಶಿಕ್ಷೆಗೀಡಾದ ಅಪರಾಧಿ. ಎಲ್ಲವ್ವ ಹೊಸಳ್ಳಿ, ನಾಗರಾಜ ಮಣ್ಣಿಕೇರಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ನಾಗರಾಜನ ಮದುವೆಗೆ ಮನೆಯವರು ಹುಡುಗಿ ನೋಡುತ್ತಿರುವ ವಿಷಯ ತಿಳಿದ ಎಲ್ಲವ್ವ ಹೊಸಳ್ಳಿ 2021ರ ಆಗಸ್ಟ್ 2ರಂದು ನಾಗರಾಜನನ್ನು ಕರೆದುಕೊಂಡು ಹೋಗಿ ಹಲವು ಕಡೆ ಸುತ್ತಾಡಿದ್ದಳು.
2021ರ ಆಗಸ್ಟ್ 7ರಂದು ಹುಬ್ಬಳ್ಳಿಯಿಂದ ಲಾರಿಯಲ್ಲಿ ಬರುವಾಗ ಲಾರಿ ಚಾಲಕನು ಊಟಕ್ಕೆ ಹೋಗಿದ್ದ ವೇಳೆ ತನ್ನ ವೇಲ್‌ನಿಂದ ನಾಗರಾಜನ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಳು. ನಂತರ ಮೊಟೆಬೆನ್ನೂರ ಬಳಿ ಶವವನ್ನು ಹೈವೆ ಮೇಲೆ ಬಿಟ್ಟು ಪರಾರಿಯಾಗಿದ್ದಳು. ಈ ಕುರಿತು ಹಾವೇರಿ ಡಿಎಸ್‌ಪಿ ಶಂಕರ ವಾರಿಹಾಳ ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಆರೋಪಿಯ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಯಲ್ಲವ್ವಳಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.