ಸ್ವಾತಂತ್ರ್ಯ ಪೂರ್ವದಲ್ಲಿಯೇ ನಡೆದಿತ್ತು ಧ್ವಜಾರೋಹಣ !; ಹಾವೇರಿ ಮುನಿಸಿಪಾಲಿಟಿ ಕಚೇರಿಗಿದೆ ಭವ್ಯ ಇತಿಹಾಸ

14 HVR 2 B
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ರಾಷ್ಟ್ರೀಯ ಸ್ವಾತಂತ್ರೃ ಹೋರಾಟದ ನೇತಾರರ ಕರೆಗೆ ಸ್ಪಂದಿಸಿ ದೇಶ ಹಾಗೂ ರಾಜ್ಯದ ಕೆಲವೇ ಸ್ಥಳಗಳಲ್ಲಿ ಸ್ವಾತಂತ್ರೃ ಪೂರ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಈ ಸ್ಥಳಗಳ ಪೈಕಿ ಹಾವೇರಿಯ ಮುನಿಸಿಪಾಲಿಟಿ ಕಚೇರಿಯೂ ಒಂದಾಗಿತ್ತು ಎಂಬ ಹೆಮ್ಮೆಯ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಜಿಲ್ಲಾಡಳಿತ ಸಮಗ್ರ ಅಧ್ಯಯನ ನಡೆಸಬೇಕಿದೆ. ಭಾರತ ಸ್ವಾತಂತ್ರ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಪಾತ್ರ ಬಹಳ ಪ್ರಮುಖವಾದದ್ದು. ಮಹಾತ್ಮ ಗಾಂಧೀಜಿ, ಡಾ.ರಾಜೇಂದ್ರ ಪ್ರಸಾದ, ಸುಭಾಷಚಂದ್ರ ಭೋಸ್, ಆಚಾರ್ಯ ಕೃಪಲಾನಿ, ಠಕ್ಕರಬಾವು, ಪಂಡಿತ ಜವಾಹರಲಾಲ ನೆಹರು, ವಿನೋಭಾ ಬಾವೆ ಹಾಗೂ ರಾಮ ಮನೋಹರ ಲೋಹಿಯಾ, ಸೇರಿದಂತೆ ರಾಷ್ಟ್ರೀಯ ನಾಯಕರ ಹಾವೇರಿ ಜಿಲ್ಲೆಯ ಭೇಟಿಯ ಕುರುಹುಗಳೇ ಇದಕ್ಕೆ ಸಾಕ್ಷಿಯಾಗಿದೆ. ಮಹನೀಯರ ಭೇಟಿ ಸ್ಥಳೀಯ ಹೋರಾಟಗಾರರಿಗೆ ಅಂದು ಹೊಸ ಸಂಚಲನ ಸೃಷ್ಟಿಸಿತ್ತು.
ಹಾವೇರಿ ಜಿಲ್ಲೆಯ ಮೈಲಾರ ಮಹಾದೇವಪ್ಪ, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರ, ಹೊಸಮನಿ ಸಿದ್ದಪ್ಪ, ವೀರನಗೌಡ ಪಾಟೀಲ, ಸೇರಿದಂತೆ ಹಲವು ಕೆಚ್ಚೆದೆಯ ವೀರರ ಹೋರಾಟದ ನೆನಪುಗಳು ಇಂದಿಗೂ ಸ್ಮರಣೀಯವಾಗಿವೆ.
ಹೀಗೆ ಸ್ವಾತಂತ್ರೃ ಹೋರಾಟದ ಕಿಚ್ಚು ದೇಶದಲ್ಲಿ ಇಮ್ಮಡಿಯಾಗಲೆಂದು ದೇಶದಲ್ಲಿ ಸ್ಥಾನಿಕ ಸ್ವರಾಜ್ಯದ ಕಾರ್ಯಾಲಯಗಳ ಮೇಲೆ ರಾಷ್ಟ್ರಧ್ವಜವನ್ನು ಏರಿಸಬೇಕೆಂದು ಅಂದಿನ ರಾಷ್ಟ್ರೀಯ ನಾಯಕರು ನಿರ್ಣಯಿಸಿದ್ದರು.
ದೇಶದಲ್ಲಿ ಈ ವಿಷಯವಾಗಿ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಧ್ವಜಾರೋಹಣ ಮಾಡಲಾಯಿತು. ಕರ್ನಾಟಕ ಹಾಗೂ ಹಳೆಯ ಅಖಂಡ ಧಾರವಾಡ ಜಿಲ್ಲೆಯಲ್ಲಿ ಈ ವಿಷಯವಾಗಿ ಸ್ವಾತಂತ್ರೃ ಹೋರಾಟಗಾರರು ಗಟ್ಟಿತನವನ್ನು ಪ್ರದರ್ಶಿಸಬೇಕೆಂಬ ಪ್ರಯತ್ನದಲ್ಲಿದ್ದರು. ಆದರೆ, ಹಾವೇರಿ ಜನತೆ ಒಂದು ಹೆಜ್ಜೆ ಮುಂದೆ ಎಂಬಂತೆ ಅಂದಿನ ಮುನಿಸಿಪಾಲಿಟಿ ಕಚೇರಿಯ ಮೇಲೆ ಧ್ವಜಾರೋಹಣ ಮಾಡಬೇಕೆಂಬ ನಿರ್ಣಯವನ್ನು ಅದಾಗಲೇ ಕೈಗೊಂಡಿದ್ದರು.
ಈ ಪ್ರಕಾರ ಮೇ 4, 1930ರಂದು ಪಟ್ಟಣದ ನಾಗರಿಕರೆಲ್ಲರೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ದ್ಯಾಮವ್ವನ ಕಟ್ಟೆ ಹಾಗೂ ಹಳೆಯ ಊರಿನಲ್ಲಿ ಹಿಂದಿನ ದಿನ ಡಂಗುರ ಸಾರಿದ್ದರು. ಹಾವೇರಿ ನಗರದಲ್ಲಿರುವ ದ್ಯಾಮವ್ವನಕಟ್ಟೆ ಅಂದು ಹೋರಾಟಗಾರರು ಬಂದು ಸೇರುವ ಕಟ್ಟೆಯಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಮೇ 4, 1930ರಂದು ಭಾನುವಾರ ಬೆಳಗ್ಗೆ 7 ಗಂಟೆಗೆ ಹಾವೇರಿ ಈಗಿನ ನಗರಸಭೆ ಕಟ್ಟಡಕ್ಕೂ ಮೊದಲು ಇದ್ದ ಹಾವೇರಿ ಮುನಿಸಿಪಾಲಿಟಿಯ ಅಂದಿನ ಕಚೇರಿಯ ಎದುರು ಸಾವಿರಾರು ಜನರು ಸೇರಿದ್ದರು. ಮುನಿಸಿಪಾಲಿಟಿ ಕಟ್ಟಡ ಹಸಿರು ತೋರಣಗಳಿಂದ ಶೃಂಗರಿಸಲ್ಪಟ್ಟಿತ್ತು. ನೌಕರರೆಲ್ಲರೂ ಖಾದಿ ಬಟ್ಟೆ ಧರಿಸಿ, ಎದೆಯ ಮೇಲೆ ಮೂರು ಬಣ್ಣದ ರಾಷ್ಟ್ರ ನಿಶಾನೆಯ ಚಿಹ್ನೆಯನ್ನು ಪ್ರದರ್ಶಿಸಿದ್ದರು.
ಅಂದಿನ ಸ್ಕೂಲ್ ಕಮಿಟಿಯ ಚೇರ್ಮನ್ ಆಗಿದ್ದ ಹೊಸಮನಿ ಸಿದ್ದಪ್ಪನವರು ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ಉತ್ಸವ ಹೊರಡಿಸಿದ್ದರು. ಊರಲ್ಲಿ ಹೆಣ್ಣುಮಕ್ಕಳು ರಾಷ್ಟ್ರಧ್ವಜಕ್ಕೆ ಆರತಿ ಬೆಳಗಿ, ಕಾಯಿ, ಕರ್ಪೂರ ಹಾಗೂ ಪುಷ್ಪಗಳನ್ನು ಅರ್ಪಿಸಿದ್ದರು. ನಂತರ 9 ಗಮಟೆಗೆ ಮುನಿಸಿಪಾಲಟಿ ಎದುರು ಸಿದ್ಧಗೊಳಿಸಿದ್ದ ಕಂಬದ ಕೆಳಗೆ ಎಲ್ಲರೂ ಜಮಾಯಿಸಿದರು. ಸ್ವಯಂಸೇವಕರು ರಾಷ್ಟ್ರಧ್ವಜವನ್ನು ಏರಿಸುವ ಕಾರ್ಯ ಮಾಡಬೇಕೆಂದು ಮುನಿಸಿಪಾಲಿಟಿಯ ಅಂದಿನ ಸದಸ್ಯ ಹೊಂಬಣ್ಣ ಹೊಂಬಣ್ಣನವರ ಪ್ರಾರ್ಥಿಸಿಕೊಂಡರು. ಮಹದೇವರಾವ ನಾಡಿಗೇರ ಇದಕ್ಕೆ ಅನುಮೋದನೆಯನ್ನು ನೀಡಿದರು.
ಪರಮಣ್ಣ ಹೊಸಮನಿಯವರು ರಾಷ್ಟ್ರಧ್ವಜವನ್ನು ಪೂಜೆಗೈದರು. ಧ್ವಜಾರೋಹಣಯಾಗುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಲಾರಂಭಿಸಿತು. ರಾಷ್ಟ್ರಗೀತೆಯ ನಂತರ ಚನ್ನಬಸಪ್ಪ ಹಾಲಪ್ಪನವರ ಜನರಿಗೂ ಮುನ್ಸಿಪಾಲಿಟಿಯ ಸರ್ವಸದಸ್ಯರಿಗೂ ಹಾಗೂ ಅಧ್ಯಕ್ಷರಿಗೂ ವಂದಿಸಿದ್ದರು.
ಈ ಅಂಶಗಳು ಅಂದು ಪ್ರಕಟವಾಗುತ್ತಿದ್ದ ‘ಬಸವರಾಜ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಪತ್ರಿಕೆಯ ವರದಿ ‘ವಿಜಯವಾಣಿ’ಗೆ ಲಭ್ಯವಾಗಿದೆ. ವರದಿಯ ಅಂಶಗಳನ್ನು ಇಲ್ಲ ಉಲ್ಲೇಖಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟವರು ಅಧ್ಯಯನ ನಡೆಸಬೇಕಿದೆ.

ಅಧ್ಯಯನ ನಡೆಸಲಿ ಜಿಲ್ಲಾಡಳಿತ
ಈ ಮೂಲಕ ರಾಷ್ಟ್ರಕಾರ್ಯದಲ್ಲಿ ಹಾವೇರಿಯು ಕರ್ನಾಟಕದಲ್ಲಿಯೇ ಅಗ್ರಗಣ್ಯವಾಗಿತ್ತು. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುವ ಮೂಲಕ ಹಾವೇರಿ ಮುನಿಸಿಪಾಲಿಟಿಯಲ್ಲಿ ಅಂದು ಆಗಿದ್ದ ಠರಾವು, ಮತ್ತಿತರ ಮಹತ್ತರವಾದ ದಾಖಲೆಗಳನ್ನು ಸಂಗ್ರಹಿಸಬೇಕು. ಈ ವಿಷಯವನ್ನು ಸುವರ್ಣಾಕ್ಷರಗಳಲ್ಲಿ ದಾಖಲೀಕರಿಸುವ ಕೆಲಸ ಆಗಬೇಕು ಎಂಬುದು ‘ವಿಜಯವಾಣಿ’ ಹಾಗೂ ದೇಶ ಭಕ್ತರ ಆಶಯವಾಗಿದೆ.

ಕೋಟ್:
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಮೊಟ್ಟಮೊದಲು ರಾಷ್ಟ್ರಧ್ವಜವನ್ನು ಹಾರಿಸಿದ ಕೀರ್ತಿ ಹಾವೇರಿಗೆ ಸಲ್ಲುತ್ತದೆ ಎಂಬ ಹೆಮ್ಮೆಯ ವಿಷಯವನ್ನು ಅಂದು ಚನ್ನಬಸಪ್ಪ ಹಾಲಪ್ಪನವರ ನೆಡೆಸುತ್ತಿದ್ದ ‘ಬಸವರಾಜ’ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
- ಪ್ರಮೋದ ನಲವಾಗಲ, ಜಿಲ್ಲಾ ಹೋಮ್ ಗಾರ್ಡ್ ಕಮಾಂಡೆಂಟ್

ಕೋಟ್:
ಪಾಟೀಲ ಪುಟ್ಟಪ್ಪನವರು ಹಾಗೂ ದೇಸಾಯಿ ಎಂಬುವರು ಬರೆದಿರುವ ‘ಹೊಸಮನಿ ಸಿದ್ದಪ್ಪನವರು’ ಎಂಬ ಪುಸ್ತಕದಲ್ಲಿ ಹಾವೇರಿ ಮುನಿಸಿಪಾಲಿಟಿಯಲ್ಲಿ ಸ್ವಾತಂತ್ರೃ ಪೂರ್ವದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗಿತ್ತು. ಈ ಬಗ್ಗೆ ಕುರುಹುಗಳು ಇದ್ದು, ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಮಗ್ರ ಅಧ್ಯಯನ ನಡೆಸಿ, ದಾಖಲೀಕರಣ ಮಾಡಬೇಕು.
- ಸುರೇಶ ಹೊಸಮನಿ, ಹೊಸಮನಿ ಸಿದ್ದಪ್ಪನವರ ಮೊಮ್ಮಗ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net