ಹಾವೇರಿ: ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಜತೆಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಪಾಲಿಸ್ಟೈರೀನ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್(ಎಸ್‌ಯುಪಿ) ತಯಾರಿಕೆ, ಆಮದು, ಸಂಗ್ರಹಣ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈನಿಂದ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಮಾರಾಟ ಮಾಡಿದರೆ ದಂಡದ ಜತೆಗೆ ಅಂಗಡಿಯ ಪರವಾನಿಗೆ ರದ್ದುಪಡಿಸಲಾಗುವುದು ಎಂದು ವ್ಯಾಪಾರಸ್ಥರಿಗೆ ನಗರಸಭೆ ಎಚ್ಚರಿಕೆ ನೀಡಿದೆ.
ಸರ್ಕಾರದ ಆದೇಶದಂತೆ ಈಗಾಗಲೇ ಪ್ಲಾಸ್ಟಿಕ್ ಕ್ಯಾರಿ ಬಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ತೋರಣ, ಪ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಸ್ಟ್ರಾಗಳು, ಕ್ಲಿಂಗ್ ಫಿಲ್ಟ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್, ಬೀಡ್ಸ್‌ನಿಂದ ತಯಾರಾದ ವಸ್ತುಗಳನ್ನು ನಿಷೇಧಿಸಲಾಗಿದೆ.
ನಿಯಮ ಉಲ್ಲಂಘಿಸಿದ ಬೀದಿ ವ್ಯಾಪಾರಿಗಳಿಗೆ ಮೊದಲ ಬಾರಿ ಎರಡು ನೂರು, ಎರಡನೇ ಬಾರಿ ಐದು ನೂರು ರೂ., ಮೂರನೇ ಬಾರಿ ಒಂದು ಸಾವಿರ ರೂ. ದಂಡ ವಿಧಿಸಲಾಗುವುದು. ನಿಯಮ ಉಲ್ಲಂಘಿಸಿದ ರಿಟೇಲರ್‌ಗಳಿಗೆ ಮೊದಲ ಬಾರಿ ಎರಡು ಸಾವಿರ ರೂ., ಎರಡನೇ ಬಾರಿ ಐದು ಸಾವಿರ ರೂ., ಮೂರನೇ ಬಾರಿ 10 ಸಾವಿರ ರೂ. ದಂಡ ವಿಧಿಸಲಾಗುವುದು. ಹಾಗೂ ಉದ್ದಿಮೆ ಪರವಾನಿಗೆ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳನ್ನು ಬಳಸಿ ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ಡಿ.ದೇವರಾಜ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.