

ಕೇಶವಮೂರ್ತಿ ವಿ.ಬಿ. ಹಾವೇರಿ
ಮುಂಗಾರು ವಿಳಂಬವಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಮಳೆಯನ್ನೇ ನಂಬಿಕೊಂಡಿರುವ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ದಶಕದಲ್ಲೇ ಅತ್ಯಂತ ಹಿನ್ನಡೆ ಅನುಭವಿಸಿದ ವರ್ಷ 2023 ಎಂಬ ಕುಖ್ಯಾತಿ ಪಡೆದಿದೆ. ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಿದ್ದ ಅನ್ನದಾತನಿಗೆ ಒಂದು ಬೆಳೆ ಕೈತಪ್ಪುವ ಭೀತಿ ಎದುರಾಗಿದೆ.
ಬಹುತೇಕ ಜೂನ್ ಮೊದಲ ವಾರದಲ್ಲಿ ಪ್ರತಿ ವರ್ಷ ಮುಂಗಾರು ಜಿಲ್ಲೆಗೆ ಪ್ರವೇಶಿಸುತ್ತಿತ್ತು. ಆದರೆ, ಈ ಬಾರಿ ಜೂನ್ ತಿಂಗಳು ಅಂತ್ಯಕ್ಕೆ ಬಂದರೂ ಮಳೆಯ ಸುಳಿವು ಸಿಗುತ್ತಿಲ್ಲ. ಅಲ್ಲಲ್ಲಿ ಅಲ್ಪಸ್ವಲ್ಪ ಅಡ್ಡಮಳೆ ಮಾತ್ರ ಆಗಿದ್ದು, ಅದು ಸಾಕಾಗುತ್ತಿಲ್ಲ. ದಶಕದಲ್ಲೇ ಈ ವರ್ಷ ಅತ್ಯಂತ ವಿಳಂಬ ಕಂಡ ವರ್ಷ 2023 ಎಂಬುದು ಅಂಕಿ ಸಂಖ್ಯೆಗಳ ಮೂಲಕ ಖಚಿತವಾಗಿದೆ. 2014ರಲ್ಲಿ ಜೂನ್ 3ಕ್ಕೆ ಹಾವೇರಿಯಲ್ಲಿ ಮುಂಗಾರು ಪ್ರವೇಶಿಸಿತ್ತು. 2015ರಲ್ಲಿ ಮೇ 30, 2016ರಲ್ಲಿ ಜೂನ್ 6, 2017ರಲ್ಲಿ ಜೂನ್ 2, 2018ರಲ್ಲಿ ಮೇ 31, 2019ರಲ್ಲಿ ಜೂನ್ 8, 2020ರಲ್ಲಿ ಜೂನ್ 6, 2021ರಲ್ಲಿ ಜೂನ್ 4, 2022ರಲ್ಲಿ ಜೂನ್ 7ರಂದು ಮುಂಗಾರು ಪ್ರವೇಶಿಸಿತ್ತು.
ಮಳೆಯಾಶ್ರಿತ ಹಾವೇರಿ ಜಿಲ್ಲೆ ಆದ್ದರಿಂದ ಬಿತ್ತನೆಯಲ್ಲಿ ತೀರಾ ಹಿನ್ನೆಡೆ ಅನುಭವಿಸುವಂತಾಗಿದೆ. ವಾಡಿಕೆಗಿಂತ ಶೇ.73.95ರಷ್ಟು ಮಳೆ ಕೊರತೆ ಉಂಟಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಕೈಬಿಟ್ಟು ಮಳೆಗಾಗಿ ಕಾಯುತ್ತ ಕುಳಿತಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 3,30,444 ಹೆಕ್ಟೆರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಈವರೆಗೆ ಕೇವಲ ಶೇ.16.28ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ. ಪ್ರಮುಖವಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಸದ್ಯ ಕೇವಲ 30,000 ಹೆಕ್ಟೆರ್‌ನಲ್ಲಿ ಮಾತ್ರ ಮೆಕ್ಕೆಜೋಳ ಬೆಳೆಯಲಾಗಿದೆ. 2,347 ಹೆಕ್ಟೆರ್‌ನಲ್ಲಿ ಹತ್ತಿ ಬೆಳೆಯಲಾಗಿದೆ. 4,500 ಹೆಕ್ಟೆರ್‌ನಲ್ಲಿ ಭತ್ತ, 6,275 ಹೆಕ್ಟೆರ್‌ನಲ್ಲಿ ಸೋಯಾಬಿನ್, 3,275 ಹೆಕ್ಟೆರ್‌ನಲ್ಲಿ ಶೇಂಗಾ ಬೆಳೆಯಲಾಗಿದೆ. ಮುಂಗಾರು ಬಾರದ ಹಿನ್ನೆಲೆಯಲ್ಲಿ ಇರುವ ಈ ಬೆಳೆಗಳನ್ನು ಉಳಿಸಿಕೊಳ್ಳುವುದು ಕೂಡ ಕಷ್ಟಕರವಾಗಿದೆ. ಜಾನುವಾರುಗಳನ್ನು ಸಾಕುವುದೂ ಸವಾಲಾಗಿದೆ.
ಜೂ.24 ಅಥವಾ 25ರಂದು ಮುಂಗಾರು ಪ್ರವೇಶಿಸುವ ಮುನ್ಸೂಚನೆ ಇದ್ದು, ಉತ್ತಮ ಮಳೆಯಾದರೆ ಅನ್ನದಾತ ನಿಟ್ಟುಸಿರು ಬಿಡುತ್ತಾನೆ. ಇಲ್ಲದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ರೈತರಿಗೆ ಅಗತ್ಯ ಸಲಹೆ, ಜಾಗೃತಿ ಮೂಡಿಸುವ ಜತೆಗೆ ರೈತನೊಂದಿಗೆ ನಿಲ್ಲುವುದು ಕೃಷಿ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ.
ಒಣಗುತ್ತಿದೆ ಫಸಲು
ಬ್ಯಾಡಗಿ, ಹಾವೇರಿ ತಾಲೂಕು ಸೇರಿ ಹಲವೆಡೆ ಈಗಾಗಲೇ ಕಬ್ಬು ಒಣಗುತ್ತಿದ್ದು, ರೈತರು ರೋಟಾವೇಟರ್ ಹಚ್ಚಿ ಫಸಲು ನಾಶಪಡಿಸುತ್ತಿದ್ದಾನೆ. ರಟ್ಟಿಹಳ್ಳಿ, ಹಿರೇಕೆರೂರ ಭಾಗದಲ್ಲಿ 20 ದಿನದ ಹಿಂದೆ ಮಳೆ ಸುರಿದಿತ್ತು. ಹಾಗಾಗಿ, ಹಲವು ರೈತರು ಗೋವಿನಜೋಳ, ಹತ್ತಿ ಬಿತ್ತನೆ ಮಾಡಿದ್ದರು. ಮಳೆ ಕೈಕೊಟ್ಟ ಕಾರಣ ಆ ಬೆಳೆಯೂ ಒಣಗುವ ಹಂತ ತಲುಪಿದೆ. ಹಲವೆಡೆ ಬೋರ್‌ವೆಲ್‌ಗಳಲ್ಲಿ ನೀರು ಖಾಲಿಯಾಗಿ ಅಡಕೆ ಬೆಳೆಯೂ ಸೊರಗುತ್ತಿದೆ. ಮಳೆ ಬಾರದಿದ್ದರೆ ಇದ್ದ ಬೆಳೆ ಒಣಗಿ ಮತ್ತೆ ಬಿತ್ತನೆ ಮಾಡುವ ಆತಂಕ ಎದುರಾಗಿದೆ.
ಕೋಟ್:
ಹತ್ತಾರು ವರ್ಷಗಳಿಂದ ಮುಂಗಾರು ಇಷ್ಟು ತಡವಾಗಿರಲಿಲ್ಲ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಬರುತ್ತಿತ್ತು. ಈ ವರ್ಷ ಮುಂಗಾರು ಆರಂಭವಾಗದ ಕಾರಣ ರೈತ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾನೆ. ಹಾಗಾಗಿ, ಸರ್ಕಾರ ಈ ವರ್ಷವನ್ನು ಬರಗಾಲ ಎಂದು ಘೋಷಿಸಿ ರೈತರ ಕಣ್ಣೀರು ಒರೆಸಬೇಕು.
ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ
ಕೋಟ್
ರೈತರು ಬೀಜ, ಗೊಬ್ಬರ ತೆಗೆದುಕೊಂಡು ಹೋಗಿದ್ದಾರೆ. ಮಳೆಗಾಗಿ ಕಾಯುತ್ತಿದ್ದಾರೆ. ಸೈಕ್ಲೋನ್ (ಚಂಡಮಾರುತ) ಇರುವ ಕಾರಣ ಮೋಡಗಳು ಚದುರಿ ಹೋಗುತ್ತಿವೆ. ಜೂ.24, 25ರಂದು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪ್ರವೇಶಿಸುವವರೆಗೆ ಬಿತ್ತನೆ ಮಾಡದಂತೆ ರೈತರಿಗೆ ಸೂಚಿಸಲಾಗಿದೆ.
ಚೇತನಾ ಪಾಟೀಲ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ ಬಾಕ್ಸ್
ಮುಂಗಾರು ಪ್ರವೇಶದ ದಶಕದ ಮಾಹಿತಿ
ವರ್ಷ ದಿನಾಂಕ
2014-15 ಜೂನ್ 3
2015-16 ಮೇ 30
2016-17 ಜೂನ್ 6
2017-18 ಜೂನ್ 2
2018-19 ಮೇ 31
2019-20 ಜೂನ್ 8
2020-21 ಜೂನ್ 6
2021-22 ಜೂನ್ 4
2022-23 ಜೂನ್ 7