

ಹಾವೇರಿ: ನಾವೆಲ್ಲರೂ ಭಾರತೀಯರು. ಪ್ರತಿಯೊಬ್ಬರಲ್ಲೂ ದೇಶದ ಮೇಲೆ ಅಭಿಮಾನ ಹಾಗೂ ಪ್ರೇಮ ಇರಬೇಕು. ದೇಶ ಸೇವೆಗೆ ಎಲ್ಲರೂ ಸದಾ ಸಿದ್ಧವಾಗಿರಬೇಕು ಎಂದು ಮಾಜಿ ಸೈನಿಕ ಮಹ್ಮದ್ ಜಹಾಂಗೀರ ಜಿ. ಖವಾಸ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 26ನೇ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಖವಾಸ, ನಾನು ಮುನ್ಸಿಪಲ್ ಹೈಸ್ಕೂಲ್‌ನ ಹಳೇ ವಿದ್ಯಾರ್ಥಿ. ಇಲ್ಲಿಯ ಶಿಕ್ಷಣದಿಂದಲೇ ನಾನು ಸೇನೆ ಸೇರಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಕೆಲಸ ಮಾಡಿದೆ. ಇಂದು ನನ್ನದೇ ಶಾಲೆಯಲ್ಲಿ ಸನ್ಮಾನ ಪಡೆದಿದ್ದಕ್ಕೆ ಖುಷಿಯಾಗುತ್ತಿದೆ ಎಂದರು.
ನಾನು ಲಡಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಫೋಕ್ರಾನ್ ಅಣು ಪರೀಕ್ಷೆ ನಡೆಸಿದ್ದರು. ನಾವಿದ್ದ ಸ್ಥಳದ ಸಮೀಪವೇ ಬಂದು ಹೋಗಿದ್ದರು. ಆದರೆ, ಅವರು ಬಂದಿದ್ದು ಯಾರಿಗೂ ಗೊತ್ತಿರಲಿಲ್ಲ. ರಕ್ಷಣಾ ವ್ಯವಸ್ಥೆಯ ರಹಸ್ಯಗಳು ಸೋರಿಕೆಯಾಗದಂತೆ ಕಾಪಾಡಬೇಕೆಂಬುದನ್ನು ಅವರಿಂದ ಕಲಿಯಬೇಕು ಎಂದರು.
ನಿವೃತ್ತ ಶಿಕ್ಷಕ ಸಂಗೂರಿನ ಬಿ.ಜಿ.ಮಕಾಂದಾರ (ಬಿಸ್ಮಿಲಾ ಶಾ ಖಾದ್ರಿ) ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‌ನಿಂದ ದೂರವಿದ್ದು, ಪುಸ್ತಕದ ಹಿಡಿದರೆ ಸಾಧನೆ ಸಾಧ್ಯವಾಗುತ್ತದೆ. ಗುರುಗಳ ಸೇವೆ ಮಾಡಿ ಶಿಕ್ಷಣ ಪಡೆಯಬೇಕು. ಆಹಾರ ಸಿಗದ ಸ್ಥಳದಲ್ಲಿದ್ದುಕೊಂಡು ಜೀವದ ಹಂಗು ತೊರೆದು ದೇಶವನ್ನು ಕಾಯುವ ಸೈನಿಕರನ್ನು ಸದಾ ನೆನೆಯಬೇಕು ಎಂದರು.
ದೇಶದಲ್ಲಿ ಇದು ನನ್ನ ಧರ್ಮ, ಅದು ನನ್ನ ಧರ್ಮ ಎಂಬ ಭಾವನೆ ಸರಿಯಲ್ಲ. ಎಲ್ಲ ಧರ್ಮಗಳೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕು. ಮನಸ್ಸು ಶುದ್ಧ ಮಾಡಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಶಾಲೆ ಮುಖ್ಯ ಶಿಕ್ಷಕಿ ಶೋಭಾ ಜಾಗಟಗೇರಿ ಮಾತನಾಡಿ, ಕಲಿಕೆಯ ಜತೆಗೆ ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಇದೇ ಕಾರಣಕ್ಕೆ ಇಂದು ಸೈನಿಕರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೂ ಸೇನೆ ಹಾಗೂ ದೇಶದ ಬಗ್ಗೆ ಅಭಿಮಾನ ಮೂಡಬೇಕು ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಇತರರು ಇದ್ದರು.