ಮುಳ್ಳುಸಜ್ಜೆ ಔಷಧದಲ್ಲಿ ಕಳೆನಾಶಕದ ಅಂಶವಿಲ್ಲ; ಹಾವೇರಿಯ ಆಗ್ರೋ ಸೆಂಟರ್‌ನವರು ಮಾರಾಟ ಮಾಡುತ್ತಿದ್ದ ಔಷಧದ ಬಗ್ಗೆ ಲ್ಯಾಬ್ ವರದಿಯಲ್ಲಿ ಪತ್ತೆ

10 Mullusajje
Published on

ಹಾವೇರಿ: ಮೆಕ್ಕೆಜೋಳ ಬೆಳೆಗೆ ವೈರಿಯಂತೆ ಕಾಡುತ್ತಿರುವ ಮುಳ್ಳುಸಜ್ಜೆ ಕಳೆ ನಿಯಂತ್ರಣಕ್ಕೆಂದು ಹಾವೇರಿ ನಗರದ ಹಾನಗಲ್ಲ ರಸ್ತೆಯ ಶ್ರೀನಿವಾಸ ಆಗ್ರೋ ಕೇಂದ್ರದವರು ನೀಡುತ್ತಿದ್ದ ಔಷಧದಲ್ಲಿ ಕಳೆನಾಶಕದ ಅಂಶವೇ ಇಲ್ಲ ಎಂಬುದು ಪ್ರಯೋಗಾಲಯದ ವರದಿಯಲ್ಲಿ ಪತ್ತೆಯಾಗಿದೆ.

ಮುಳ್ಳುಸಜ್ಜೆ ಕಳೆನಾಶಕವೆಂದು ವೀಡ್ ಮಾಸ್ಟರ್, ಮತ್ತಿತರ ಔಷಧವನ್ನು ಆಗ್ರೋ ಸೆಂಟರ್‌ನವರು ರೈತರಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಉತ್ತಮ ಫಲಿತಾಂಶವಿದೆ ಎಂದು ಕೆಲ ರೈತರು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಹಾಗಾಗಿ, ಕಳೆದ ವಾರ ಈ ಕಳೆನಾಶಕ ಖರೀದಿಸಲು ನೂರಾರು ರೈತರು ಮುಗಿಬಿದ್ದಿದ್ದರು. ಔಷಧ ಪೂರೈಸುವಂತೆ ರೈತರು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಔಷಧದ ಮಾದರಿ ಸಂಗ್ರಹಿಸಿ ಜು.3ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ವರದಿ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಬಿ.ಎಸ್., ಶ್ರೀನಿವಾಸ ಆಗ್ರೋ ಸೆಂಟರ್‌ನವರು ಮಾರಾಟ ಮಾಡುತ್ತಿದ್ದ ವೀಡ್ ಮಾಸ್ಟರ್‌ನಲ್ಲಿ ‘ಟೊಪ್ರೊಮೈಜಿನ್’ ಎಂಬ ಕಳೆನಾಶಕದ ಅಂಶವಿದೆ ಎಂಬ ಸ್ಟಿಕರ್ ಅಂಟಿಸಲಾಗಿದೆ. ಆದರೆ, ಇದರಲ್ಲಿ ‘ಟೊಪ್ರೊಮೈಜಿನ್’ ಅಂಶವಿಲ್ಲ ಹಾಗೂ ಕಳೆನಾಶಕದ ಅಂಶವೂ ಇಲ್ಲ ಎಂಬುದು ಲ್ಯಾಬ್ ವರದಿಯಲ್ಲಿ ದೃಢವಾಗಿದೆ. ಹಾಗಾಗಿ, ಇದನ್ನು ಮಾರಾಟ ಮಾಡಲು ಅವಕಾಶವಿಲ್ಲ. ಈ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಪರ್ಯಾಯ ಬೆಳೆ ಬೆಳೆಯಿರಿ

ಮುಳ್ಳುಸಜ್ಜೆ ಕಳೆ ನಿಯಂತ್ರಣಕ್ಕೆ ಅಧಿಕೃತವಾಗಿ ಯಾವುದೇ ಕಳೆನಾಶಕ ಇಲ್ಲ. ಹೀಗಾಗಿ, ರೈತರು ಎಡೆಕುಂಟೆ ಹೊಡೆದುಕೊಂಡೇ ನಿಯಂತ್ರಿಸಬೇಕು. ಮೆಕ್ಕೆಜೋಳದ ಕಳೆನಾಶಕಗಳನ್ನು ಬಿತ್ತನೆ ಮಾಡಿದ 12ರಿಂದ 13 ದಿನದೊಳಗೆ ಸಿಂಪಡಿಸಿದರೆ ಕಳೆ ಹತೋಟಿಗೆ ಬರುತ್ತವೆ. ಪ್ರತಿವರ್ಷ ಕೇವಲ ಮೆಕ್ಕೆಜೋಳವನ್ನೇ ಬೆಳೆಯದೇ ಪರ್ಯಾಯವಾಗಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಮುಳ್ಳುಸಜ್ಜೆ ನಿವಾರಿಸಬಹುದು. ರೈತರು ಯಾರೋ ಹೇಳಿದರೆಂದು ಸರ್ಕಾರದಿಂದ ಪ್ರಮಾಣೀಕೃತವಾಗದ ಔಷಧಗಳನ್ನು ಖರೀದಿಸಬಾರದು. ಅಧಿಕೃತ ಕಳೆನಾಶಕ ಖರೀದಿಸಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ರೈತರಿಗೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net