ಸಹಜ ಕೃಷಿಯಲ್ಲಿ ಖುಷಿ ಕಂಡ ದಂಪತಿ ; 6 ಎಕರೆ ತೋಟದಲ್ಲಿ 200 ಬಗೆಯ ಭರ್ಜರಿ ಬೆಳೆ; ರಸಾಯನಿಕ ಬಳಸದೇ ಕಡಿಮೆ ನೀರಲ್ಲಿ ಬೇಸಾಯ

Sahaja Krushi 2
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಯಾವುದೇ ರಾಸಾಯನಿಕ ಬಳಸದೇ, ಕಡಿಮೆ ನೀರು ಬಳಸಿ ಸಹಜ ಕೃಷಿಯ ಮೂಲಕ ಕೇವಲ 6 ಎಕರೆ ತೋಟದಲ್ಲಿ 200ಕ್ಕೂ ಹೆಚ್ಚು ಬಗೆಯ ಬೆಳೆ ಬೆಳೆಯುವ ಮೂಲಕ ರಾಣೆಬೆನ್ನೂರ ತಾಲೂಕಿನ ಮುದೇನೂರ ಗ್ರಾಮದ ರೈತ ದಂಪತಿ ಶಂಕರಗೌಡ ಹಾಗೂ ಸುನಿತಾ ಗಂಗನಗೌಡರ ಖುಷಿ ಕಂಡುಕೊಂಡಿದ್ದಾರೆ.
ನಾಲ್ಕು ಎಕರೆ ಜಮೀನಿನಲ್ಲಿ ಅಡಕೆ ತೋಟ ಮಾಡಿ, ಅಡಕೆ ಗಿಡಗಳ ಮಧ್ಯೆ 50 ಬಗೆಯ ಹಣ್ಣಿನ ಗಿಡಗಳು, ಬಗೆ ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ಕಾಳುಮೆಣಸು, ಚಕ್ಕೆ, ಲವಂಗ, ಜಾಜಿಕಾಯಿ, ಏಲಕ್ಕಿ, ಶುಂಠಿ, ಅರಿಶಿಣ, ಸೇರಿದಂತೆ 20 ಬಗೆಯ ಮಸಾಲೆ ಪದಾರ್ಥಗಳು, 10 ಬಗೆಯ ತರಕಾರಿ, 5 ಬಗೆಯ ಗೆಡ್ಡೆ, ಗೆಣಸು, ತೋಟದ ಸುತ್ತ ಔಷಧ ಸಸ್ಯ, ಬೇವು, ಹೆಬ್ಬೇವು, ಮತ್ತಿತರ ಗಿಡಗಳನ್ನು ಬೆಳೆಸಿದ್ದಾರೆ. ಇಲ್ಲಿ ಬೆಳೆದ ಹಣ್ಣುಗಳನ್ನು ಸುತ್ತಮುತ್ತಲಿನ ಜನರು ನೇರವಾಗಿ ಖರೀದಿಸುತ್ತಾರೆ.
ವರ್ಷಕ್ಕೆ ಅಂದಾಜು 15ರಿಂದ 20 ಲಕ್ಷ ರೂ. ಆದಾಯ ಗಳಿಸುತ್ತೇವೆ. ಖರ್ಚು ಕಡಿಮೆ ಲಾಭ ಅಧಿಕ. ಕೂಲಿಕಾರರ ಅವಶ್ಯಕತೆಯೂ ಇಲ್ಲ. ಹಾಗಾಗಿ, ಪ್ರಕೃತಿಯ ಅಂಗವಾಗಿರುವ ಪ್ರಾಣಿ, ಪಕ್ಷಿಗಳಿಗಾಗಿ ತೋಟದಲ್ಲಿರುವ ಹತ್ತಿ ಹಣ್ಣು, ಸೀತಾಫಲ, ಪೇರಲ, ಸಜ್ಜೆ ಸೇರಿದಂತೆ ಅನೇಕ ಬೆಳೆಯನ್ನು ಮೀಸಲಿಡುತ್ತೇವೆ ಎನ್ನುತ್ತಾರೆ ಶಂಕರಗೌಡರು.
ಸಹಜ ಕೃಷಿ ಎಂದರೇನು ?
ರಾಸಾಯನಿಕ ಗೊಬ್ಬರ, ಎರೆಹುಳ ಗೊಬ್ಬರ ಯಾವುದನ್ನೂ ಬಳಸದೇ ಸಹಜವಾಗಿ ಅರಣ್ಯದಲ್ಲಿ ಬೆಳೆಯುವಂತೆ ಗಿಡ, ಮರಗಳನ್ನು ಬೆಳೆಸುವ ಪದ್ಧತಿಗೆ ಸಹಜ ಕೃಷಿ ಎನ್ನುತ್ತಾರೆ. ತೋಟದಲ್ಲಿ ಕಳೆ ಕೀಳುವುದಿಲ್ಲ. ಯಂತ್ರಗಳನ್ನು ಬಳಸುವುದಿಲ್ಲ. ಮರದಿಂದ ಉದುರಿದ ಎಲೆ, ಕಡ್ಡಿಗಳೇ ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಬಹುತೇಕ ಮಳೆಯ ನೀರು ಸಾಕಾಗುತ್ತದೆ. ಬೇಸಿಗೆಯಲ್ಲಿ ಮಾತ್ರ ನೀರು ಬಿಡುತ್ತೇವೆ ಎನ್ನುತ್ತಾರೆ ಶಂಕರೇಗೌಡರು.
ಕಣ್ಣು ಕುಕ್ಕುವ ವಿದೇಶಿ ಹಣ್ಣು
ದೇಶ- ವಿದೇಶದ 50 ಬಗೆಯ ಹಣ್ಣಿನ ಗಿಡಗಳು ಇಲ್ಲಿವೆ. ಹಲಸು, ಮಾವು, ಸೀತಾಫಲ, ಪಪ್ಪಾಯ, ಪೇರಲ, ಲಿಂಬೆ, ರಾಮಫಲ, ಅಂಜೂರ, ವಿದೇಶಿ ತಳಿಗಳಾದ ರ‌್ಯಾಂಬೂಟಾನ್, ಮ್ಯಾಂಗೋಸ್ಟಿನ್, ಎಗ್ ಫ್ರೂಟ್, ಫ್ಯಾಷನ್ ಫ್ರೂಟ್, ಚೆರ‌್ರಿ, ಆ್ಯಪಲ್, ಮತ್ತಿತರ ಗಿಡಗಳು ಕಣ್ಣು ಕುಕ್ಕುತ್ತವೆ.
ಕೋಟ್:
ಕೃಷಿಯಿಂದ ಖುಷಿ, ನೆಮ್ಮದಿ, ಆರೋಗ್ಯ ಇದೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೃಷಿ ಮಾಡಬೇಕು. ಒಂದು ಎಕರೆ ಜಮೀನು ಇದ್ದರೆ ಸಾಕು, ಕಡಿಮೆ ನೀರಿನಲ್ಲಿ ತಿಂಗಳಿಗೆ ಒಂದು ಲಕ್ಷ ಆದಾಯ ತೆಗೆಯಬಹುದು.
ಶಂಕರಗೌಡ ಗಂಗನಗೌಡ, ಯಶಸ್ವಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net