

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮೃಗಶಿರ ಮಳೆಯ ಆರ್ಭಟ ಜೋರಾಗಿತ್ತು. ಮಳೆಗಾಗಿ ಕಾಯುತ್ತ ಕುಳಿತಿದ್ದ ರೈತರಿಗೆ ಈ ಮಳೆ ತುಸು ನಿರಾಳ ಭಾವ ಮೂಡಿಸಿದೆ.
ಹವಾಮಾನ ಇಲಾಖೆಯ ನಿರೀಕ್ಷೆಯಂತೆ ರಾಜ್ಯ ಹಾಗೂ ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು, ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮವಾದ ಮಳೆ ಸುರಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಬಿರುಸು ಪಡೆದಿವೆ. ಕೆಲ ರೈತರ ಹೊಲಗಳಲ್ಲಿ ಬದುಗಳು ಕಿತ್ತುಕೊಂಡು ಹೋಗಿವೆ.
ಶುಕ್ರವಾರ ಸುರಿದ ಮಳೆಯಿಂದಾಗಿ ಹಾವೇರಿ ನಗರದ ಲೋಕೋಪಯೋಗಿ ಇಲಾಖೆಯ ಕಚೇರಿ ಎದುರು ಪಿಬಿ ರಸ್ತೆಯ ಮೇಲೆ ನೀರು ನದಿಯಂತೆ ಹರಿಯಿತು. ಮೊಣಕಾಲುದ್ದ ನೀರು ಇದ್ದ ಕಾರಣ ವಾಹನ ಸವಾರರು ಪರದಾಡಿದರು. ಅವೈಜ್ಞಾನಿಕ ರಸ್ತೆ, ಮಳೆನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಕೆಲಕಾಲ ಅವಾಂತರ ಸೃಷ್ಟಿಯಾಗಿತ್ತು.