

ಹಾವೇರಿ: ವಿದ್ಯಾರ್ಥಿಗಳು ಉತ್ತಮ ಜೀವನ ಹೊಂದಬೇಕಾದರೆ ಶಿಕ್ಷಣ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಎಂಆರ್‌ಎಂ ಸಂಸ್ಥೆಯ ಶಿಕ್ಷಕರ ಪಾತ್ರ ಶ್ಲಾಘನೀಯವಾದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದರು.
ಇಲ್ಲಿನ ಶಿವಾಜಿನಗರ 4ನೇ ಕ್ರಾಸ್‌ನ ಎಂಆಆರ್‌ಎಂ ಶಿಕ್ಷಣ ಸಂಸ್ಥೆಯ ಎಂಆರ್‌ಎಂ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಾಂಬೋರೆ’ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೇ ಮುಖ್ಯ. ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಬೆಳೆಯಬೇಕೆಂದರೆ ಕ್ರೀಡೆಗೂ ಪ್ರಾಮುಖ್ಯತೆಯನ್ನು ಕೊಡಬೇಕು. ಆ ನಿಟ್ಟಿನಲ್ಲಿ ಈ ಶಾಲೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪ್ರಜಾ ಪ್ರಗತಿ ಟ್ರಸ್ಟ್ ಕಾರ್ಯದರ್ಶಿ ಗಾಂಧಿ ಎಂ.ಎಸ್ ಮಾತನಾಡಿ, ಬಾಲ್ಯದಿಂದ ಮುಪ್ಪಿನವರೆಗಿನ ಜೀವನ ಹೇಗಿರುತ್ತದೆ. ಮಕ್ಕಳು ವೈಯಕ್ತಿಕ ಅಭಿವೃದ್ಧಿ ಮತ್ತು ಕೌಶಲಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.
ಮುಖ್ಯೋಪಾಧ್ಯಾಯೆ ಅಕ್ಷತಾ ಸುರಪುರಮಠ ಶಾಲಾ ವಾರ್ಷಿಕ ವರದಿ ವಾಚಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ರಾಮ ಮೋಹನ ರಾವ್, ನಿರ್ದೇಶಕ ರಾಜೀವ ಸಾಯಿ, ವಾಣಿ ಎಂ., ವಿದ್ಯಾರ್ಥಿಗಳು, ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ, ಪಾಲಕರು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಸಮಾರಂಭ
ಬೆಳಗಿನ ಅವಧಿಯಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ, ಗಾಯನದ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು.