ಮೊಬೈಲ್ ಬಿಡಿ ಪಠ್ಯಪುಸ್ತಕ ಓದಿ; ಎಂಆರ್‌ಎಂ ಕಾಲೇಜ್ ಸಮಾರಂಭದಲ್ಲಿ ಎಎಸ್‌ಪಿ ಶಿರಕೋಳ ಕಿವಿಮಾತು

24 HVR 4
Published on

ಹಾವೇರಿ: ಆಧುನಿಕ ಜಗತ್ತಿನಲ್ಲಿ ಮೊಬೈಲ್ ವಿದ್ಯಾರ್ಥಿಗಳ ಶತೃ ಇದ್ದಂತೆ. ಮೊಬೈಲ್ ಬಳಕೆ ತ್ಯಜಿಸಿ, ಪಠ್ಯಪುಸ್ತಕಗಳ ವಿಷಯದ ಕಡೆಗೆ ಗಮನಹರಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಲ್.ವೈ ಶಿರಕೋಳ ಮಕ್ಕಳಿಗೆ ಕಿವಿಮಾತು ಹೇಳಿದರು.

ಎಂಆರ್‌ಎಂ ಪಿಯು ಕಾಲೇಜ್ ಹಾಗೂ ಜನಸಿರಿ ಫೌಂಡೇಶನ್ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪರೀಕ್ಷೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಸಿರಿ ಸಂಸ್ಥೆಯ ಮುಖ್ಯಸ್ಥೆ ನಾಗಲೇಖ ಮಾತನಾಡಿ, ಜನನ ಎಂಬ ಮೂರಕ್ಷರದಿಂದ ಪ್ರಾರಂಭಗೊಂಡ ಮಾನವನ ಜೀವನವು ಮರಣವೆಂಬ ಕೊನೆಯ ಮೂರಕ್ಷರದ ಬದುಕು ಸಾರ್ಥಕವಾಗುವಂತೆ ಬದುಕಬೇಕು ಎಂದರು.

ಎಂಆರ್‌ಎಂ ಕಾಲೇಜ್‌ನ ಮುಖ್ಯಸ್ಥ ಡಾ.ರಾಮಮೋಹನ್ ರಾವ್ ಮಾತನಾಡಿ, ನಿರ್ಭೀತಿಯಿಂದ ಹೇಗೆ ಪರೀಕ್ಷೆ ಎದುರಿಸಬೇಕು ಎಂಬ ಕುರಿತು ಪ್ರಾಯೋಗಿಕವಾಗಿ ವಿವರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವೇದಮೂರ್ತಿ ಗದಿಗಯ್ಯ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೌಂಡೇಶನ್ ಜಿಲ್ಲಾಧ್ಯಕ್ಷ ಆರ್.ಎನ್ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲೆಯ ಎಂಟು ತಾಲೂಕಿನ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸಿ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ವಿತರಿಸಲಾಯಿತು.

ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಫೌಂಡೇಶನ್ ಉಪಾಧ್ಯಕ್ಷ ಪರಮೇಶ್ವರಯ್ಯ ಮಠದ, ವೀರೇಶ ಚಿಲ್ಲೂರ ಮಠ, ಹನುಮಂತಪ್ಪ ನಾಗಣ್ಣನವರ, ಆರ್.ಬಿ ಪಾಟೀಲ, ಇತರರಿದ್ದರು. ಮಹೇಶ ಮರಿಬಸಣ್ಣನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net