

ಹಾವೇರಿ: ಅಧಿಕಾರದ ದುರ್ಬಳಕೆ, ಕುಟುಂಬದ ದರ್ಪ, ಹಣ ಮತ್ತು ಜಾತಿ ಪ್ರಾಬಲ್ಯದಿಂದ ನೂರಾರು ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮೇ 30ರಂದು ಹಾಸನದಲ್ಲಿ ‘ಹೋರಾಟದ ನಡಿಗೆ ಹಾಸನದ ಕಡೆಗೆ’ ಹೆಸರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸಮಾನ ಮನಸ್ಕ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಜ್ವಲ್ ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕು. ಅವನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕೇಂದ್ರ ಸರ್ಕಾರ ಪ್ರಜ್ವಲ್‌ನ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಕೂಡಲೇ ರದ್ದುಪಡಿಸಿ, ಇಂಟರ್ ಪೋಲ್ ಸಹಾಯಪಡೆದು ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಲ್ಲಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ಎಸ್‌ಐಟಿಗೆ ಅಗತ್ಯ ನೆರವು ನೀಡಬೇಕು. ಆತನಿಗೆ ಕಠಿಣ ಶಿಕ್ಷೆ ದೊರೆಯುವಂತೆ ಮಾಡಬೇಕೆಂದರು.
ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಮಾತನಾಡಿ, ಈ ಲೈಂಗಿಕ ಹಗರಣದಲ್ಲಿ ವಿವಿಧ ಬಗೆಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೌಪ್ಯತೆ ಕಾಪಾಡಲು, ಅವರಿಗೆ ಬೇಕಾದ ಮನೋವೈದ್ಯಕೀಯ ಅಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ ನೀಡಬೇಕು ಎಂದರು.
ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದನ್ನು ಖಾತ್ರಿ ಪಡಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಹೀಗಾಗಿ ಆಮೂಲಾಗ್ರವಾಗಿ, ನಿರ್ಭೀತಿಯಿಂದ ತನಿಖೆ ನಡೆಸಲು ಬೇಕಾದ ಅಧಿಕಾರವನ್ನು ಮತ್ತು ಅನುಕೂಲಗಳನ್ನು ಎಸ್‌ಐಟಿ ಮುಖ್ಯಸ್ಥರಿಗೆ ಸರ್ಕಾರವು ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಬಸವರಾಜ ಹಾದಿಮನಿ, ಬಸವರಾಜ ಎಸ್, ಶೆಟ್ಟಿ ವಿಭೂತಿ, ಅಶೋಕ ಮರೆಣ್ಣನವರ, ಎನ್.ಆರ್.ಅಬಲೂರು, ಲಕ್ಷ್ಮಣ ಕೆಂಗಳಪ್ಪನವರ, ಸಿದ್ದು ಮರೆಮ್ಮನವರ ಇದ್ದರು.