ಗಡಿಯಲ್ಲಿ ಪುಂಡಾಟಿಕೆ ಮಾಡುವವರನ್ನು ಗಡಿಪಾರು ಮಾಡಿ; ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ

Published on

ಹಾವೇರಿ: ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಮೊದಲು ಸರ್ಕಾರ ಗಡಿಪಾರು ಮಾಡಬೇಕು. ಕನ್ನಡಿಗರಿಗೆ ಅವಮಾನ ಮಾಡುವವರ ಮೇಲೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಟ್ಟವಾಗಿ ಕನ್ನಡ ಮಾತನಾಡುತ್ತೇನೆ ಎಂದ ಕಂಡಕ್ಟರ್‌ಗೆ ಅಭಿನಂದನೆ. ಪುಂಡರನ್ನು ಸರ್ಕಾರ ಒದ್ದು ಹೊರಗೆ ಹಾಕಬೇಕು. ಕಂಡಕ್ಟರ್ ಮೇಲಿನ ಫೋಕ್ಸೋ ಕೇಸ್ ಹಿಂಪಡೆಯಬೇಕು. ಈ ಘಟನೆಯ ಬಗ್ಗೆ ಮಂತ್ರಿಗಳು ಮೃದುವಾಗಿ ಮಾತನಾಡುತ್ತಾರೆ. ಮಂತ್ರಿಗಳು ಎಲ್ಲೋ ಮರಾಠಿ ಮಾತನಾಡುವವರ ಮುಲಾಜಿಗೆ ಬಿದ್ದಿದ್ದಾರೆ. ಕನ್ನಡ ಚಳುವಳಿಗಾರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

ಕೂಡಲೇ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜತೆ ಮಾತನಾಡಬೇಕು, ಪುಂಡರಿಗೆ ಎಚ್ಚರಿಕೆ ಕೊಡಬೇಕು. ಇಲ್ಲಿಯ ಅನ್ನ ತಿಂದು, ನೀರು ಕುಡಿದು ನಾಲಾಯಕ್ ಅನ್ನುವ ಪದಬಳಕೆ ಮಾಡುವುದು ಸರಿಯಲ್ಲ. ಕೂಡಲೇ ಇಂಥವರನ್ನು ಗಡಿಪಾರು ಮಾಡಬೇಕು. ಹಿಂದೆ ನಮ್ಮ ಸರ್ಕಾರ ಇದ್ದಾಗ ಇಂಥದ್ದೇ ಒಂದು ಪ್ರಕರಣ ನಡೆದಿತ್ತು, ಆಗ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು ಎಂದು ಹೇಳಿದರು

ಎಸ್‌ಇಪಿಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರ. ಎಸ್‌ಸಿ,ಎಸ್‌ಟಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ದಲಿತರ ಹಣವನ್ನೇ ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಮೊದಲು ಅಂತಹ ಸಮಾಜಗಳಿಗೆ ಹಣ ಬಿಡುಗಡೆ ಮಾಡಲಿ. ಎಸ್‌ಸಿ, ಎಸ್‌ಟಿ ನಿಗಮಗಳಿಗೆ ಮೊದಲೇ ಕಡಿಮೆ ಹಣ ನಿಗದಿ ಮಾಡಿದ್ದಾರೆ. ಅದರಲ್ಲಿ ಈವರೆಗೆ ಕೇವಲ ಶೇ.25ರಷ್ಟು ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net