ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ದೊರೆಯುವ ವಿಶ್ವಾಸವಿದೆ; ಡಾ.ಆರ್.ಎಂ.ಕುಬೇರಪ್ಪ ಭರವಸೆ

Dr.RM Kuberappa
Published on

ಹಾವೇರಿ: ಹಲವು ದಶಕಗಳಿಂದ ಹಾವೇರಿ ಲೋಕಸಭಾ ಕ್ಷೇತ್ರ ಸೇರಿದಂತೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಪಕ್ಷದಲ್ಲಿ ದುಡಿದಿರುವ ಕಾರಣ ಈ ಬಾರಿ ನನಗೆ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯುವ ಭರವಸೆ ಇದೆ ಎಂದು ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ.ಕುಬೇರಪ್ಪ ಭರವಸೆ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ನಾನು ನಾಲ್ಕು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಅನೇಕ ಕಾರ್ಯಕರ್ತರ ಪಡೆ ನನ್ನೊಂದಿಗಿದೆ. ಅವರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ. ಪಕ್ಷದ ಹಲವು ಹಿರಿಯ ಮುಖಂಡರು ನನಗೆ ಬೆಂಬಲಿಸಿದ್ದಾರೆ. ರಾಷ್ಟಮಟ್ಟದ ಎಐಸಿಸಿ ಹಿರಿಯರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ ಎಂದರು.
ನಾನು ಸ್ಥಳೀಯ ವ್ಯಕ್ತಿ. ಕಾಂಗ್ರೆಸ್‌ನಲ್ಲಿ ಈವರೆಗೆ ಸ್ಥಳೀಯರಿಗೆ ಟಿಕೆಟ್ ಸಿಕ್ಕಿಲ್ಲ. ಒಂದು ಬಾರಿ ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ ರೆಡ್ಡಿ, ಪ್ರೊ.ಎಸ್.ಎಚ್.ಹುಚ್ಚಗೊಂಡರ, ಇತರರಿದ್ದರು.
ಸಚಿವರು ಸ್ಪರ್ಧಿಸಲ್ಲ
ಲೋಕಸಭೆಗೆ ಕಾಂಗ್ರೆಸ್‌ನ ಹಲವು ಮುಖಂಡರು ಟಿಕೆಟ್ ಕೇಳುತ್ತಿದ್ದಾರೆ. ಆದರೆ, ಅದಕ್ಕೆ ಅದರದ್ದೇ ಆದ ಮಾನದಂಡಗಳಿವೆ. ಹಿರಿತನ, ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ಸಿಗಲಿದೆ. ಸಚಿವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಸಚಿವರಿಗೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೊಡಲಿದ್ದಾರೆ ಎಂದು ಡಾ.ಆರ್.ಎಂ.ಕುಬೇರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net