

ಹಾವೇರಿ: ಎರಡು ವಾರಗಳಿಂದ ಸುರಿಯುತ್ತಿರುವ ಅತಿಯಾದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿದರು.
ಮೊದಲಿಗೆ ಹಾವೇರಿ ತಾಲೂಕಿನ ಕನಕಾಪೂರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ಒಡೆದ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿರುವ ಕುರಿತು ಪರಿಶೀಲಿಸಿದರು. ಸ್ಥಳೀಯ ರೈತರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ನಾಗೇಂದ್ರನಮಟ್ಟಿ ಸೇತುವೆ ಪರಿಶೀಲನೆ
ಹಾವೇರಿಯ ನಾಗೇಂದ್ರನಮಟ್ಟಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್‌ಪಾಸ್‌ಗೆ ಭೇಟಿ ನೀಡಿದ ಬೊಮ್ಮಾಯಿ ಮಳೆನೀರು, ಕೊಳಚೆ ನೀರು ಹರಿಯುವುದರಿಂದ ಆಗುತ್ತಿರುವ ಸಮಸ್ಯೆಯನ್ನು ಪರಿವೀಕ್ಷಿಸಿದರು.
ಪ್ರತಿಸಲ ಮಳೆ ಬಂದಾಗಲೂ ಇಲ್ಲಿ ಎರಡು, ಮೂರ ಅಡಿಯಷ್ಟು ಎತ್ತರದಲ್ಲಿ ಚರಂಡಿ ನೀರು, ಮಳೆ ನೀರು ಹರಿಯುತ್ತದೆ. ದೊಡ್ಡ ಮಳೆಯಾದರಂತೂ ಇಲ್ಲಿ ಸಂಪರ್ಕ ಸಂಪೂರ್ಣ ಬಂದ್ ಆಗುತ್ತದೆ. ಹಲವು ಬಾರಿ ವಾಹನಗಳು ಸಿಲುಕಿಕೊಂಡು ನಾಹುತ ಸೃಷ್ಟಿಸಿದೆ. ಈ ಸ್ಥಳದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.