ರಾಜ್ಯಕ್ಕೆ ಕೇಂದ್ರ 44,870 ಕೋಟಿ ರೂ. ಕೊಟ್ಟಿದೆ; ಬಜೆಟ್‌ನಲ್ಲಿ ಮಲತಾಯಿ ಧೋರಣೆ ತೋರಿಲ್ಲ; ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ

Bommai
Published on

ಹಾವೇರಿ: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಲ್ಲ. ಕೇಂದ್ರದಿಂದ ವಿವಿಧ ಯೋಜನೆಗಳಿಗೆ ಡೆವಲ್ಯೂಷನ್ ಆಫ್ ಫಂಡ್‌ನಲ್ಲಿ ರಾಜ್ಯಕ್ಕೆ 44,870 ಕೋಟಿ ರೂ. ಕೊಟ್ಟಿದೆ. ಕಾಂಗ್ರೆಸ್‌ನವರು ಮೊದಲು ಬಜೆಟ್‌ನ ಪೂರ್ಣ ಪಾಠ ಓದಲಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಜೆಟ್‌ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ ಎಂದು ಕಾಂಗ್ರೆಸ್‌ನವರು ಮೊದಲು ಪೂರ್ಣ ಬಜೆಟ್ ಸಾರಾಂಶ ಓದಲಿ. ಅದೇ ಅಕೌಂಟ್‌ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಹಣ ಬಂದಿತ್ತು ಎಂದು ನೋಡಲಿ. ರಾಜ್ಯಕ್ಕೆ ಕೇಂದ್ರದಿಂದ ಅನುದಾನವೇ ಬಂದಿಲ್ಲ ಎಂದು ಕಾಂಗ್ರೆಸ್‌ನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಡೆವಲ್ಯೂಷನ್ ಆಫ್ ಫಂಡ್‌ನಲ್ಲಿ ಕರ್ನಾಟಕಕ್ಕೆ 44,870 ಕೋಟಿ ರೂ. ಕೊಟ್ಟಿದ್ದಾರೆ. ಉದಾಹರಣೆಗೆ ಕಳೆದ ಮೂರು ವರ್ಷಗಳಿಂದ ರಾಜ್ಯದ ರೈಲ್ವೆ ಯೋಜನೆಗೆ ಪ್ರತಿ ವರ್ಷ ಸುಮಾರು 7,000 ಕೋಟಿ ರೂ. ಬರುತ್ತಿದೆ. ಯುಪಿಎ ಅವಧಿಯಲ್ಲಿ ಕೇವಲ ವಾರ್ಷಿಕ 700 ಕೋಟಿ ರೂ. ಬರುತ್ತಿತ್ತು. ಅಲ್ಲದೇ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಹಾಗೂ ಭೂಸ್ವಾಧೀನ ಮಾಡಿ ಕೊಡದಿರುವುದಕ್ಕೆ ಯೋಜನೆಗಳು ವಿಳಂಬವಾಗುತ್ತಿವೆ. ಈ ಬಗ್ಗೆ ಇತ್ತಿಚೆಗೆ ದೆಹಲಿಯಲ್ಲಿ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವರು ರಾಜ್ಯದ ಪಾಲಿನ ಹಣ ಹಾಗೂ ಭೂಸ್ವಾಧೀನ ಮಾಡಿಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಎಲ್ಲ ಮಾಹಿತಿ ಬಿಡುಗಡೆ ಮಾಡುವೆ ಎಂದು ತಿಳಿಸಿದರು.
ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕದ ಪ್ರಗತಿಗೆ ಎಲ್ಲ ಕೊಟ್ಟಿದ್ದಾರೆ. ಇನ್ನಷ್ಟು ಕೊಡಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ಕೊಡಬೇಕಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅವರು ಹಣಕಾಸು ಇಲಾಖೆ ಅನುಮತಿ ಪಡೆದು ನೀಡುವುದಾಗಿ ತಿಳಿಸಿದ್ದಾರೆ. ಪ್ರಯತ್ನ ಮಾಡಿದರೆ ಕೇಂದ್ರದಿಂದ ಹಣ ಬರುತ್ತದೆ. ಆದರೆ, ಕಾಂಗ್ರೆಸ್‌ನವರು ಆಪಾದನೆ ಮಾಡಿಕೊಂಡು ಕೂತಿದ್ದಾರೆ. ಈಗ ಅನುದಾನ ಹರಿಯಲು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಬರಲಿದೆ ಎಂದು ಹೇಳಿದರು.
ಬಿಜೆಪಿಯವರು ಮನೆ ಮುರುಕರು ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು ಎಂದು ಜನಕ್ಕೆ ಗೊತ್ತಾಗಿದೆ. ಮನೆ ಮುರುಕರು ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದರು.
ಮೈತ್ರಿ ಸಭೆ ಇಂದು
ಮುಡಾ ಹಗರಣದ ಕುರಿತು ಭಾನುವಾರ ಬಿಜೆಪಿ- ಜೆಡಿಎಸ್ ಸಭೆ ನಡೆಯಲಿದ್ದು, ಸಭೆಯಲ್ಲಿ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಮೂಡಾ ಹಗರಣದಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ತಪ್ಪಾಗಿಲ್ಲ ಅಂದರೆ ತನಿಖೆಗೆ ಯಾಕೆ ಕೊಟ್ಟಿದಾರೆ. ತನಿಖೆಯಿಂದ ಎಲ್ಲ ಗೊತ್ತಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net