

ಹಾವೇರಿ: ರಾಜ್ಯ ಸರ್ಕಾರ ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ. ಸರ್ಕಾರದ ಬಳಿ ಶ್ವೇತಪತ್ರ ಇಲ್ಲ. ಬ್ಲ್ಯಾಕ್ ಪೇಪರ್ ಇದೆ. ರಾಜ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ಸಾಲ ಹೊರೆಸುತ್ತಿದೆ. ಇದಕ್ಕಿಂತ ದೊಡ್ಡ ಶ್ವೇತಪತ್ರ ಬೇಕಾ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ ಸತ್ಯ ಹೇಳಿದ್ದಾರೆ. ಸುಳ್ಳನ್ನು ಎಷ್ಟು ದಿನ ಅಂತ ಮರೆಮಾಚಲು ಆಗುತ್ತದೆ ? ಸತ್ಯ ಹೊರಬರಲೇಬೇಕು. ಪರಮೇಶ್ವರ ಬಾಯಲ್ಲಿ ಬಂದರೆ ಶಿವನ ಬಾಯಲ್ಲಿ ಬಂದ ಹಾಗೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ ದೆಹಲಿಗೆ ತೆರಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರವರ ಕೆಲಸಕ್ಕೆ ದೆಹಲಿಗೆ ಹೋಗುತ್ತಾರೆ, ಬರುತ್ತಾರೆ. ಅದಕ್ಕೆಲ್ಲ ನಾವು ಪ್ರತಿಕ್ರಿಯಿಸಲ್ಲ ಎಂದರು.
ಕೃಷಿ ಇಲಾಖೆ ನಿರ್ಲಕ್ಷ್ಯ
ರಾಣೆಬೆನ್ನೂರಲ್ಲಿ ಕಳಪೆ ಬೀಜ ಮಾರಾಟ ಮಾಡಲಾಗಿದೆ ಎಂದು ಕೇಸ್ ದಾಖಲಾಗಿದೆ. ಮಳೆ ಆಗುತ್ತಿದೆ. ಗೊಬ್ಬರ ಸಿಗುತ್ತಿಲ್ಲ. ಮಳೆ ಹೆಚ್ಚಾಗುತ್ತಿರುವುದರಿಂದ ಯೂರಿಯಾ ಗೊಬ್ಬರ ಬೇಕು. ಆದರೆ, ಯೂರಿಯಾ ಕೊರತೆ ಆಗುತ್ತಿದೆ. ಬಂದಿದ್ದೆಲ್ಲ ಹೋಲ್ಸೇಲ್ನಲ್ಲಿ ದುಡ್ಡಿಗೆ ಮಾರಾಟ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆ ಮೇಲೆ ನಾನು ನೇರವಾಗಿ ಆರೋಪ ಮಾಡುತ್ತಿದ್ದೇನೆ. ದುಡ್ಡು ತೆಗೆದುಕೊಂಡು ಮಾರಾಟ ಮಾಡಿಕೊಂಡಿದ್ದಾರೆ. ಯೂರಿಯಾ ಗೊಬ್ಬರ ಅತ್ಯಂತ ಅವಶ್ಯಕತೆ ಇದೆ. ಆದರೆ ಸಿಗುತ್ತಿಲ್ಲ. ಸೊಸೈಟಿಗಳಿಗೂ ಕೊಡುತ್ತಿಲ್ಲ, ಲೋಕಲ್ ಡೀಲರ್ಸ್‌ಗೂ ಕೊಡುತ್ತಿಲ್ಲ. ಕೃಷಿ ಇಲಾಖೆ ಹಾವೇರಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.