ಜನರ ಧ್ವನಿಯಾಗಿ ಸಂಸದರ ಕಚೇರಿ ಕಾರ್ಯ; ಪ್ರತಿ ಗುರುವಾರ ಹಾವೇರಿಯಲ್ಲಿ, ಶುಕ್ರವಾರ ಗದಗನಲ್ಲಿ ಖುದ್ದು ಹಾಜರ್; ಬೊಮ್ಮಾಯಿ

6 HVR 7
Published on

ಹಾವೇರಿ: ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಜನರ ಸಮಸ್ಯೆಗಳ ಧ್ವನಿಯಾಗಿ ಸಂಸದರ ಕಾರ್ಯಾಲಯ ಕಾರ್ಯ ನಿರ್ವಹಿಸಲಿದೆ. ಪ್ರತಿ ಗುರುವಾರ ಹಾವೇರಿ ಕಾರ್ಯಾಲಯದಲ್ಲಿ ಹಾಗೂ ಪ್ರತಿ ಶುಕ್ರವಾರ ಗದಗನಲ್ಲಿ ನಾನು ಖುದ್ದು ಹಾಜರಿದ್ದು ಜನರ ಅಹವಾಲು ಸ್ವೀಕರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಸಂಸದರ ನೂತನ ಕಾರ್ಯಾಲಯವನ್ನು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಲೋಕಸಭೆ ಚುನಾವಣೆ ನಂತರ ಸುವ್ಯವಸ್ಥಿತ ಕಚೇರಿ ನಿರ್ಮಿಸಲು ಯೋಜಿಸಲಾಗಿತ್ತು. ಸ್ವಲ್ಪ ತಡವಾದರೂ ಅಚ್ಚುಕಟ್ಟಾದ ಕಚೇರಿ ಮಾಡಿದ್ದೇವೆ. ಇಲ್ಲಿ ಅಹವಾಲು ಸ್ವೀಕಾರ ಮಾತ್ರವಲ್ಲ. ಅವುಗಳಿಗೆ ಪರಿಹಾರ ಕೊಡುವ ಕೆಲಸವನ್ನೂ ಮಾಡುತ್ತೇವೆ. ಪ್ರತಿ ಗುರುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ನಾನೇ ಆಗಮಿಸಲಿದ್ದು, ಅನಿವಾರ್ಯ ಇದ್ದಾಗ ಮಾತ್ರ ಗೈರಾಗುವೆ. ಉಳಿದ ದಿನ ನಮ್ಮ ಸಿಬ್ಬಂದಿ ಅಹವಾಲು ಸ್ವೀಕರಿಸುತ್ತಾರೆ. ಸಾರ್ವಜನಿಕರು ಸಂಘ ಸಂಸ್ಥೆಗಳಿಗೆ ಈ ಕಚೇರಿ ಮುಕ್ತವಾಗಿರುತ್ತದೆ ಎಂದರು.

ಸಾರ್ವಜನಿಕ ಸಮಸ್ಯೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಅನುಷ್ಠಾನ, ಇತರ ಸಮಸ್ಯೆಗಳಿಗೆ ಜನ ಸಂಸದರ ಕಚೇರಿ ಸಂಪರ್ಕಿಸುತ್ತಾರೆ. ಮೊದಲ ದಿನವೇ ಹತ್ತಾರು ಅಹವಾಲು ಬಂದಿವೆ. ನಮ್ಮ ಕಚೇರಿಯಿಂದ ಬಂದ ಎಲ್ಲ ಸಮಸ್ಯೆಗಳು ಹಾಗೂ ಪತ್ರಗಳಿಗೆ ತ್ವರಿತವಾಗಿ ಸ್ಪಂದಿಸಿ, ಬಗೆಹರಿಸಬೇಕು ಎಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಆಗ್ರಹಿಸುತ್ತೇನೆ ಎಂದರು. ಶಿಗ್ಗಾಂವಿ ಬಗ್ಗೆ ದಯವಿಟ್ಟು ಏನೂ ಮಾತನಾಡಬೇಡಿ. ನೋ ಕಮೆಂಟ್ಸ್ ಎಂದರು.

ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಬಸವರಾಜ ಅರಬಗೊಂಡ, ಇತರರಿದ್ದರು.

ಅಕ್ರಮ ಲೇಔಟ್‌ಗೆ ಡಿಸಿ ಕಡಿವಾಣ ಹಾಕಬೇಕು

ಹಾವೇರಿಯಲ್ಲಿ ಅಕ್ರಮ ಲೇಔಟ್‌ಗಳ ಹಾವಳಿ ಹೆಚ್ಚಾಗುತ್ತಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಅಕ್ರಮ ಲೇಔಟ್‌ಗಳಿಗೆ ಡಿಸಿ ಸಮೇತರಾಗಿ ಅಧಿಕಾರಿಗಳು ಕಡಿವಾಣ ಹಾಕಬೇಕು. ರಾಜಕೀಯ ನಾಯಕರು ಇದಕ್ಕೆ ಪ್ರೋತ್ಸಾಹ ಕೊಡಬಾರದು. ಎಲ್ಲೆಲ್ಲಿ ಅಕ್ರಮ ಲೇಔಟ್‌ಗಳು ಆಗಿವೆ. ಅವುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಡಿಸಿ ವಿಶೇಷ ಕಾಳಜಿ ವಹಿಸಬೇಕು. ಮುಂದಿನ ಸಭೆಯಲ್ಲಿ ವಿಶೇಷ ಚರ್ಚೆ ಮಾಡಲಾಗುವುದು.

ನಂದು ಬಿಜೆಪಿ ಬಣ

ವಕ್ಫ್ ವಿಚಾರದಲ್ಲಿ ನೀವು ಯಾವ ಬಣದಲ್ಲಿ ಇದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಬಿಜೆಪಿ ಬಣದಲ್ಲಿದ್ದೇನೆ. ಬಡವರಿಗೆ ಮನೆ, ಮಠ, ಜಮೀನು, ಶಾಲೆ, ಆಸ್ಪತ್ರೆ ಎಲ್ಲ ಸಮಸ್ಯೆಗೆ ತೀವ್ರಗತಿಯ ಪರಿಹಾರ ಆಗಬೇಕು. ಆ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ಜೆಪಿಸಿ ಕಮಿಟಿ ಪರಿಶೀಲನೆ ಅವಧಿ ಹೆಚ್ಚಿಸಲಾಗಿದೆ. ಹಾಗಾಗಿ, ಈ ಲೋಕಸಭೆ ಅಧಿವೇಶನದಲ್ಲಿ ವಕ್ಫ್ ಕುರಿತು ಚರ್ಚೆ ಆಗುವುದಿಲ್ಲ. ಮುಂದೆ ಚರ್ಚೆ ಆಗಲಿದೆ ಎಂದರು.

ಹಾವೇರಿಯಲ್ಲಿ ವಂದೇ ಭಾರತ ನಿಲುಗಡೆ

ಜಿಲ್ಲಾ ಕೇಂದ್ರದ ಅಭಿವೃದ್ಧಿ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈಗಿರುವ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮೊದಲು ಸರಿಯಾಗಿ ಮಾಡದೇ ಸ್ಮಾರ್ಟ್ ಸಿಟಿ ಎನ್ನುತ್ತಿದ್ದಾರೆ. ಉದಾಹರಣೆಗೆ ಅಮೃತ ನಗರೋತ್ಥಾನ ಯೋಜನೆಯಡಿ ನಾನು ಸಿಎಂ ಇದ್ದಾಗ ಕುಡಿಯುವ ನೀರು ಪೂರೈಕೆಗೆ ಹಣ ಕೊಟ್ಟಿದ್ದೆ. ಕಾಮಗಾರಿ ಸಮಸ್ಯೆಯಾಗಿ ಗುತ್ತಿಗೆದಾರ ಓಡಿ ಹೋಗಿದ್ದಾನೆ. ರಾಜ್ಯ ಸರ್ಕಾರದಿಂದ ಅಗತ್ಯ ಯೋಜನೆ ರೂಪಿಸಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ. ಹೆದ್ದಾರಿ ಹಾಗೂ ರೈಲ್ವೆ ಕಾಮಗಾರಿಗಳ ಕುರಿತು ಚರ್ಚಿಸಿದ್ದೇನೆ. ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಅಧಿವೇಶನದ ನಂತರ ಚಾಲನೆ ನೀಡಲಾಗುವುದು ಎಂದರು.

ಆರೋಗ್ಯ ಇಲಾಖೆ ರೋಗಗ್ರಸ್ಥವಾಗಿದೆ

ಆರೋಗ್ಯ ಇಲಾಖೆಗೆ ಇಲಾಖೆಗೆ ಸರ್ಜರಿ ಅವಶ್ಯಕತೆ ಇದೆ. ಇಲಾಖೆ ರೋಗಗ್ರಸ್ಥವಾಗಿದೆ. ಸರಿಯಾಗಿ ಔಷಧ ಸಿಗುತ್ತಿಲ್ಲ. ಪ್ರತಿ ತಿಂಗಳು ಇಂಡೆಂಟ್ ಹಾಕುತ್ತಾರೆ. ಯಾಕೆ ಸ್ಟಾಕ್ ಮಾಡುತ್ತಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ದಿವಾಳಿತನ ಎದ್ದಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣದಲ್ಲಿ ಯಾವುದೇ ತಲೆದಂಡ ಆಗಿಲ್ಲ. ಅಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇದು ಅಕ್ಷಮ್ಯ ಅಪರಾಧ. ಸಮಸ್ಯೆಗಳ ಸುಳಿಯಲ್ಲಿರುವ ಜೀರೋ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಹಾಸನದಲ್ಲಿ ಸಮಾವೇಶ ಮಾಡಿತು ಎಂದು ಬೊಮ್ಮಾಯಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net