ಶಿಗ್ಗಾಂವಿ ಕ್ಷೇತ್ರಕ್ಕೆ ಮಂಜೂರಾಗಿದ್ದ ಬಾಕಿ ಅನುದಾನ ಬಿಡುಗಡೆ ಮಾಡಿ; ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ

Published on

ಹಾವೇರಿ: ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ್ದ 300 ಕೋಟಿ ರೂ. ಅನುದಾನದಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬೊಮ್ಮಾಯಿ, ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಜಯಶಾಲಿಯಾಗಿದ್ದು, ತಮಗೂ ಹಾಗೂ ತಮ್ಮ ಪಕ್ಷಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ನಮ್ಮ ಸರ್ಕಾರವಿದ್ದಾಗ ಹಲವಾರು ಯೋಜನೆ ಹಾಗೂ ಕಾಮಗಾರಿಗಳಿಗೆ ಸುಮಾರು 300 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಅದರಲ್ಲಿ ಕೆಲ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕೆಲವನ್ನು ರದ್ದು ಮಾಡಲಾಗಿದೆ. ಈ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ಮುಜರಾಯಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಮತ್ತು ನಿಗಮಗಳಿಂದ ಕೈಗೊಳ್ಳಲಾಗಿತ್ತು. ಈ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಲಾದರೂ ಅವುಗಳಿಗೆ ಮತ್ತೆ ಚಾಲನೆಕೊಟ್ಟು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ.

ಉಪ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ತಾವು ಕೊಟ್ಟ ಮಾತಿನಂತೆ ಮೇಲೆ ಕಾಣಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೀರಿ ಎಂದು ನಂಬಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯಾವ ಕಾಮಗಾರಿಗೆ ಎಷ್ಟು ಹಣ ಬರಬೇಕಿದೆ ?

ಶಿಗ್ಗಾಂವಿಯ 250 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ 96.50 ಕೋಟಿ ರೂ. ಮಂಜೂರಾಗಿದ್ದು, 27.34 ಕೋಟಿ ರೂ. ಬಾಕಿ ಉಳಿದಿದೆ. ಶಿಗ್ಗಾಂವಿಯ ವಿವಿಐಪಿ ಅತಿಥಿ ಗೃಹ ನಿರ್ಮಾಣಕ್ಕೆ 5.30 ಕೋಟಿ ರೂ. ಮಂಜೂರಾಗಿದ್ದು, 78.00 ಲಕ್ಷ ರೂ. ಬಾಕಿ ಇದೆ. ಸರ್ಕಾರಿ ಉಪಕರಣಗಳ ತರಬೇತಿ ಕೇಂದ್ರದ ಕಟ್ಟಡ (ಜೆ.ಟಿ.ಟಿ.ಸಿ) ನಿರ್ಮಾಣಕ್ಕೆ 73.75 ಕೋಟಿ ರೂ. ಮಂಜೂರಾಗಿದ್ದು, 50.00 ಕೋಟಿ ರೂ. (ನಬಾರ್ಡ) ಬಾಕಿ ಉಳಿದಿದೆ. ಶೀತಲ ಗೃಹ ನಿರ್ಮಾಣಕ್ಕೆ 9.83 ಕೋಟಿ ಮಂಜೂರಾಗಿದ್ದು 6.00 ಕೋಟಿ ರೂ. ಬಾಕಿ ಉಳಿದಿದೆ.

ಶಿಗ್ಗಾಂವಿಯಲ್ಲಿ ಟೆಕ್ಸಟೈಲ್ ಪಾರ್ಕ್ ನಿರ್ಮಾಣಕ್ಕೆ 31.25 ಕೋಟಿ ರೂ. ಮಂಜೂರಾಗಿದ್ದು, 5.50 ಕೋಟಿ ರೂ. ಬಾಕಿ ಉಳಿದಿದೆ. ಸವಣೂರ ಆಯುರ್ವೇದಿಕ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 44 ಕೋಟಿ ರೂ. ಮಂಜೂರಾಗಿದ್ದು, 18.59 ಬಾಕಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net