ಸರ್ಕಾರಿ ಕೆಪಿಎಸ್ ಶಾಲೆ ದಾಖಲಾತಿಗೆ ಲಂಚ !; ಈ ಮಟ್ಟಕ್ಕೆ ಭ್ರಷ್ಟಾಚಾರಕ್ಕೆ ಇಳಿದದ್ದು ಒಳ್ಳೆಯ ಲಕ್ಷಣವಲ್ಲ; ದಿಶಾ ತ್ರೈಮಾಸಿಕ ಸಭೆಯಲ್ಲಿ ಸಂಸದ ಬೊಮ್ಮಾಯಿ ಆತಂಕ

26 HVR 2
Published on

ಹಾವೇರಿ: ಸವಣೂರು ಸೇರಿದಂತೆ ಜಿಲ್ಲೆಯ ಕೆಲ ಕೆಪಿಎಸ್ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಮುಖ್ಯ ಶಿಕ್ಷಕರು ಹಣ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಮಟ್ಟಕ್ಕೆ ಭ್ರಷ್ಟಾಚಾರಕ್ಕೆ ಇಳಿದಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ದಿಶಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬಡವರ ಪುಟಾಣಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಭ್ರಷ್ಟಚಾರ ನಡೆದರೆ ಮುಂದಿನ ದಿನಗಳಲ್ಲಿ ದೇಶದ ಗತಿ ಏನು ?. ಶಿಕ್ಷಣ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಗೊತ್ತಾಗಿದೆ. ಉಪನಿರ್ದೇಶಕರು ವಿಷಯ ಗೊತ್ತಾದ ಬಳಿಕವೂ ಯಾವ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಷಯ ತನಿಖೆಯಿಂದ ಗೊತ್ತಾಗುತ್ತದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಯಾ ಇಲಾಖೆ ಅಧಿಕಾರಿಗಳು ಕ್ರೀಯಾಯೋಜನೆ ರೂಪಿಸಿ, ಆಯಾ ಸಾಲಿನಲ್ಲೇ ಆ ಯೋಜನೆಗಳ ಗುರಿ ಸಾಧನೆಗೆ ಕಾಳಜಿಯಿಂದ ಹಾಗೂ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಒಬ್ಬ ಅಧಿಕಾರಿಯಾದರೂ ಅಭಿವೃದ್ಧಿ ಬಗ್ಗೆ ವರದಿ ನೀಡುತ್ತಿಲ್ಲ. ಯಾವಾಗಲೂ ಕಾರಣಗಳನ್ನು ಹೇಳುತ್ತೀರಿ, ಕೆಲಸ ಮಾಡಲು ಕಾರಣಗಳು ಬೇಕಿಲ್ಲ, ಮನಸು ಬೇಕು. ಸಮಸ್ಯೆಗಳನ್ನು ಬಗೆಹರಿಸಲು ಆಗದಿದ್ದರೆ ಯಾಕೆ ಕೆಲಸಕ್ಕೆ ಬರುತ್ತೀರಿ ಎಂದು ಚಿವುಟಿದರು.

ಸಮಾಜದ ಬಗ್ಗೆ ಕಾಳಜಿ ಇರಬೇಕು. ಒಂದು ಯೋಜನೆ ಪೂರ್ಣಗೊಳ್ಳಲು ಐದಾರು ವರ್ಷ ಕಳೆದರೆ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಹೇಗೆ ಸಾಧ್ಯ. ಹಾಗಾಗಿ ಅಧಿಕಾರಿಗಳು ಜವಾಬ್ದಾರಿಯಿಂದ, ಸಮನ್ವಯದಿಂದ ಯೋಜನೆಗಳನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಜಿಂದಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಡವರಿಗೆ ಸೂರು ಕಲ್ಪಿಸಿ

ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆಹಾರ, ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ವಸತಿ ಸಮಸ್ಯೆ ದೊಡ್ಡದಾಗಿದೆ. ಬಡತನ ನೀಗಿಸಲು ಮನೆ ಬೇಕು. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಹೆದ್ದಾರಿ, ಸರ್ವಿಸ್ ರಸ್ತೆ ಸರಿಪಡಿಸಿ

ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯಾವಾಗ ಮುಗಿಸುತ್ತೀರಿ ? ಶಿಗ್ಗಾಂವಿ ಪಟ್ಟಣ ಹಾಗೂ ಬಂಕಾಪುರ, ಕುರ್ಸಾಪುರ ಬಳಿ ಸರ್ವಿಸ್ ರಸ್ತೆ ಹದಗೆಟ್ಟಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಜನ ಬೇಸತ್ತಿದ್ದಾರೆ. ಆದಷ್ಟು ಬೇಗ ಸರಿಪಡಿಸಿ ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು, ಜುಲೈ 10ರೊಳಗೆ ಮೋಟೆಬೆನ್ನೂರ ಬಳಿ ಸೇತುವೆಯನ್ನು ಬಳಕೆಗೆ ಕೊಡುತ್ತೇವೆ. ಶಿಗ್ಗಾಂವಿ ಬಳಿ ಸರ್ವಿಸ್ ರಸ್ತೆ ಸರಿಪಡಿಸುತ್ತೇವೆ ಎಂದು ಹೇಳಿದರು.

ಅರಣ್ಯ ಲೂಟಿ ಮಾಡುತ್ತಿದ್ದಾರೆ

ಜಿಲ್ಲೆಯ ಹಲವೆಡೆ ಅರಣ್ಯ ನಾಶಪಡಿಸಿ, ಲೂಟಿ ಹೊಡೆಯುತ್ತಿದ್ದಾರೆ. ಕೃಷಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಅವರ ಅಪ್ಪನ ಆಸ್ತಿಯಂತೆ ಹಂಚುತ್ತಿದ್ದಾರೆ. ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವ ಅರಣ್ಯ ಇಲಾಖೆ ಅಧಿಕಾರಿಗಳು, ಸರ್ಕಾರದ ಅರಣ್ಯ ನಾಶ, ಒತ್ತುವರಿ ಯಾಕೆ ತಡೆಯಲ್ಲ. ನೀವು ಕಚೇರಿಯಲ್ಲಿ ಕುಳಿತರೆ ಏನೂ ಗೊತ್ತಾಗಲ್ಲ. ಆರ್‌ಎಫ್‌ಒ, ಫಾರೆಸ್ಟರ್, ಸಿಬ್ಬಂದಿ ಏನು ಮಾಡುತ್ತಿದ್ದಾರೆ. ನಾನು ಸರ್ವೆ ನಂಬರ್ ಕೊಡುತ್ತೇನೆ. ಒತ್ತುವರಿ ತಡೆಯುತ್ತೀರಾ ? ಎಂದು ಡಿಫ್‌ಒ ಅಬ್ದುಲ್ ಅಜೀಜ್ ಅವರಿಗೆ ಸವಾಲು ಹಾಕಿದರು. ನಾವು 20 ವರ್ಷ ಕಾಪಾಡಿಕೊಂಡು ಬಂದ ಅರಣ್ಯ ಇಂದು ಹಾಳಾಗುತ್ತಿದೆ. ನೋವಾಗುತ್ತಿದೆ. ನಾವು ದೊಡ್ಡ ಪವರ್ ಅಲ್ಲಿದ್ದೆವು. ಆಗ ಎಲ್ಲರಿಗೂ ಹಂಚಬಹುದಿತ್ತಲ್ಲ. ಸುಮ್ಮನೆ ಕೂರಬೇಡಿ ಸರ್ಕಾರದ ಋಣ ತೀರಿಸಿ ಎಂದು ಕುಟುಕಿದರು.

ನಿಮ್ಮ ಮಕ್ಕಳಿಗೆ ಪೌಡರ್ ಕೊಡಿ

ಅಂಗನವಾಡಿ ಮಕ್ಕಳಿಗೆ ನೀಡುವ ಪೌಡರ್ ಸೇವಿಸಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮೊದಲು ಅಧಿಕಾರಿಗಳ ತಮ್ಮ ಮಕ್ಕಳಿಗೆ ಸೇವಿಸಲು ಕೊಡಿ. ಅವರು ತಿಂದರೆ ಅಂಗನವಾಡಿ ಮಕ್ಕಳಿಗೆ ಕೊಡಿ. ಇಲ್ಲವೇ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net