ಕುಂಟುನೆಪ ಬಿಡಿ, ಜನರಿಗೆ ನೀರು ಕೊಡಿ; ಪ್ರತಿ 15 ದಿನಕ್ಕೊಮ್ಮೆ ಜಲಜೀವನ್ ಮಿಷನ್ ವರದಿ ನೀಡಿ; ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ

24 HVR 6
Published on

ಹಾವೇರಿ: ಜಲಜೀವನ್ ಮೀಷನ್ (ಜೆಜೆಎಂ) ಯೋಜನೆಗೆ ಕೋಟಿಗಟ್ಟಲೇ ಅನುದಾನ ವ್ಯಯಿಸಲಾಗುತ್ತಿದೆ. ಆದರೆ, ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಕುಂಟುನೆಪ ಹೇಳುವುದನ್ನು ಬಿಟ್ಟು, ಕಚೇರಿಯಿಂದ ಹೊರಬಂದು ಗುಣಮಟ್ಟದ ಕಾಮಗಾರಿ ನಡೆಸಿ, ಜನರಿಗೆ ನೀರು ಕೊಡಬೇಕು. ಪ್ರತಿ 15 ದಿನಗಳಿಗೊಮ್ಮೆ ಕಾಮಗಾರಿಯ ವರದಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆಯಲ್ಲಿ ಅವರು ಮಾತನಾಡಿದರು. ನಳ ಅಳಡಿಸಿದರೆ ಸಾಲದು, ಅತ್ಯಂತ ಜವಾಬ್ದಾರಿಯಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಕಾಮಗಾರಿ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿ, ಸಮಸ್ಯೆ ಇದ್ದರೆ ಪರಿಹರಿಸಿ ಜನರಿಗೆ ನೀರು ಕೊಡುವ ಕೆಲಸ ಮಾಡಬೇಕು. ಯಾವುದೇ ಹಳ್ಳಿಗೆ ನೀರು ಬಂದಿಲ್ಲ ಎಂಬು ದೂರು ಬರಬಾರದು ಎಂದು ತಾಕೀತು ಮಾಡಿದರು.

ಜಿಲ್ಲೆಯ ತಡಸ, ಆಣೂರ ಹಾಗೂ ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ(ಎಂವಿಎಸ್)ಗಳನ್ನು ಮೇ ಅಂತ್ಯದೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕಾಮಗಾರಿ ಆರಂಭವಾಗಿ ಎರಡೂವರೆ ವರ್ಷವಾದರೂ ಪೂರ್ಣಗೊಳಿಸಿಲ್ಲ. ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಬೇರೆಡೆ ವರ್ಗಾವಣೆ ತಗೆದುಕೊಂಡು ಹೋಗಿ ಎಂದು ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಪಂ ಸಿಇಒಗೆ ನಿರ್ದೇಶಿಸಿದರು.

ವಸತಿ ಯೋಜನೆ, ಸ್ವಚ್ಛಭಾರತ ಮಿಷನ್, ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾಲಮಿತಿಯೊಳಗೆ ಗುರಿಸಾಧನೆ ಮಾಡಬೇಕು. ಕೆಲಸ ಮಾಡದಿರಲು ನೂರು ಕಾರಣಗಳು ಸಿಗುತ್ತವೆ. ಆದರೆ ಕೆಲಸ ಮಾಡಲು ಯಾವುದೇ ಕಾರಣಬೇಕಿಲ್ಲ. ಗುರಿ ಸಾಧನೆಗೆ ಮನಸ್ಸು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಗುರುತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಇದನ್ನು ಅರಿತುಕೊಂಡು ಸಕಾರಾತ್ಮವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆ ಯಾವುದೇ ಕ್ಷೇತ್ರದಲ್ಲಿ ಹಿಂದೆ ಉಳಿಯಬಾರದು. ರೈತರು, ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಆಸಕ್ತಯಿಂದ ಕೆಲಸ ಮಾಡಬೇಕು ಎಂದರು.

ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಹೊಲಗಳಿಗೆ ದಾರಿ ನಿರ್ಮಾಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಅವರು, ವಿವಿಧ ವಸತಿ ಯೋಜನೆ, ಸ್ವಚ್ಛಭಾರತ ಯೋಜನೆ, ಮನರೇಗಾ ಯೋಜನೆ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್, ಇತರರು ಉಪಸ್ಥಿತರಿದ್ದರು.

ಅವೈಜ್ಞಾನಿಕ ಗ್ರಾಮ ಸಡಕ್ ಯೋಜನೆ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಅಲ್ಲಿ ಜನ ಓಡಾಡುವುದಿಲ್ಲ. ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಾರ್ವಜನಿಕರು ಓಡಾಡುವಲ್ಲಿ ಕಾಮಗಾರಿ ಮಾಡಿ. ರಸ್ತೆ ಮಾಡುವ ಮೊದಲು ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು. ಐದು ಸಾವಿರ ಜನಸಂಖ್ಯೆ ಇದ್ದು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಇಲ್ಲದ ಜಿಲ್ಲೆಯ ಗ್ರಾಮಗಳ ಸರ್ವೆ ಮಾಡಿ. ಆ ಗ್ರಾಮಗಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಬೊಮ್ಮಾಯಿ ಸೂಚಿಸಿದರು.

ಹೆಚ್ಚಿನ ಬೆಡ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿ

ತಾಯಿ- ಶಿಶು ಮರಣದ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, ಐಸಿಯು ಬೆಡ್ ಸಮಸ್ಯೆ ಇದ್ದರೆ, ಜಿಲ್ಲಾಸ್ಪತ್ರೆಗೆ ಹೆಚ್ಚುವರಿ 30 ಹಾಗೂ ತಾಲೂಕು ಆಸ್ಪತ್ರೆಗಳಿಗೆ ತಲಾ ಐದು ಐಸಿಯು ಬೆಡ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿ. ಜಿಲ್ಲೆಯಲ್ಲಿ ತಾಯಿ ಹಾಗೂ ಶಿಶು ಮರಣ ಸಂಭವಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಯವಂತೆ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net