

ಹಾವೇರಿ: ಉದ್ಯಮಿಗಳ ಜತೆಗೆ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವ ರೀತಿ ನಡೆದುಕೊಳ್ಳುತ್ತಾರೋ ಅದೇ ರೀತಿಯಲ್ಲಿ ರೈತರೊಂದಿಗೂ ಸ್ನೇಹಮಯವಾಗಿ ನಡೆದುಕೊಳ್ಳಬೇಕು. ರೈತರು ಅತ್ಯಂತ ಪ್ರಾಮಾಣಿಕ ಗ್ರಾಹಕರು ಎಂಬುದನ್ನು ಮರೆಯಬಾರದು. ರೈತರಿಗೆ ಬೇಕಾದ ಸಾಲ, ಸಬ್ಸಿಡಿ, ಇತ್ಯಾದಿ ಸೌಕರ್ಯಗಳನ್ನು ಸುಲಭವಾಗಿ ದೊರೆಯುವಂತೆ ಬ್ಯಾಂಕ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ರೈತರು ವಿಶ್ವಾಸ ಕಳೆದುಕೊಳ್ಳುವ ಮುನ್ನವೇ ಸರಿಯಾಗಿ ಕೆಲಸ ಮಾಡಬೇಕಿದೆ. ರೈತರಿಗೆ ಕೃಷಿ ಸಾಲ, ಸಬ್ಸಿಡಿ ಮತ್ತಿತರ ಸೌಲಭ್ಯಗಳ ಟಾರ್ಗೆಟ್ ರೀಚ್ ಆಗಬೇಕು ಎಂದರು.
ಜಿಲ್ಲೆಯ ಕೆಲ ಬ್ಯಾಂಕ್‌ಗಳ ಸಿಡಿ, ಕ್ರೆಡಿಟ್, ಡೆಪಾಸಿಟ್ ರೇಷಿಯೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಕಳೆದ ಸಭೆಯಲ್ಲಿ ನೀಡಿದ್ದ ಸೂಚನೆ ಪಾಲಿಸದ ಬ್ಯಾಂಕುಗಳ ವಿರುದ್ಧ ಗರಂ ಆದರು. ಜಿಲ್ಲೆಯ ಜನರಿಂದ ಡೆಪಾಸಿಟ್ ಹೆಚ್ಚು ಪಡೆದು ಸಾಲ ಕಡಿಮೆ ಕೊಡುತ್ತಿರುವುದು ಸರಿಯಲ್ಲ. ಈ ಕಾರ್ಯವೈಖರಿ ಸರಿಯಾದುದಲ್ಲ. ಈ ಕುರಿತು ಆಯಾ ಬ್ಯಾಂಕ್‌ನ ಆಡಳಿತ ಮಂಡಳಿಗೆ ಪತ್ರ ಬರೆಯುತ್ತೇನೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಾಲ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ, ಕೆವಿಜಿ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಸೋಮಶೇಖರ, ನಬಾರ್ಡ್ ಅಧಿಕಾರಿ ರಂಗನಾಥ ಎಸ್., ಯೂನಿಯನ್ ಬ್ಯಾಂಕ್‌ನ ದೀಪಕುಮಾರ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹೊಸ ಶಾಖೆಗಳನ್ನು ಆರಂಭಿಸಿ
ಆರ್‌ಬಿಐ ಮಾರ್ಗಸೂಚಿ ಅನುಸಾರ 5,000 ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು. ಗುತ್ತಲ ಹಾಗೂ ಹೊಸರಿತ್ತಿಯಲ್ಲಿ ಹೊಸ ಶಾಖೆ ಆರಂಭವಾಗುತ್ತಿವೆ. ಚಂದಾಪುರದಲ್ಲಿ ಕೆವಿಜಿ ಬ್ಯಾಂಕ್ ಶಾಖೆ ಆರಂಭಿಸಬೇಕು. ಹಾನಗಲ್ಲನ ಎಸ್‌ಬಿಐ ಶಾಖೆ ಮುಖ್ಯ ಶಾಖೆಗೆ ವಿಲೀನ ಮಾಡುವ ಬದಲು, ಅಕ್ಕಿಆಲೂರಿಗೆ ವರ್ಗಾಯಿಸಿ. ಕಂಚಾರಗಟ್ಟಿ, ಯಲವಗಿ ಹಾಗೂ ಕಳಸೂರ ಗ್ರಾಮದಲ್ಲಿ ಹೊಸ ಶಾಖೆ ಆರಂಭಿಸಿ ಎಂದು ಬೊಮ್ಮಾಯಿ ಸೂಚಿಸಿದರು.
ಕೆಸಿಸಿ ಪ್ರಾದೇಶಿಕ ಕಚೇರಿ ಆರಂಭಕ್ಕೆ ಪತ್ರ
ಡಿಸಿಸಿ ಬ್ಯಾಂಕ್‌ನಲ್ಲಿ ಧಾರವಾಡ ಹಾಗೂ ಗದಗಕ್ಕಿಂತ ಹೆಚ್ಚು ಡೆಪಾಸಿಟ್ ಹೊಂದಿರುವ ಹಾವೇರಿ ಜಿಲ್ಲೆಗೆ ಕಡಿಮೆ ಸಾಲ ನೀಡಿರುವುದು ವಿಷಾಧಕರ ಸಂಗತಿ. ಹೆಚ್ಚು ಡೆಪಾಸಿಟ್ ಮಾಡಿರುವ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಲು ಕೂಡಲೇ ಪೂರ್ಣ ಪ್ರಮಾಣದ ಕೆಸಿಸಿ ಪ್ರಾದೇಶಿಕ ಕಚೇರಿ ಆರಂಭಿಸಿ, ಸ್ವತಂತ್ರ ಅಧಿಕಾರ ನೀಡುವಂತೆ ಆರ್‌ಬಿಐಗೆ ಪತ್ರ ಬರೆಯುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸಂಸದರು ಸೂಚಿಸಿದರು.
ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸಮಿತಿ
ಸಾಲ ವಸೂಲಿಗೆ ಮೈಕ್ರೋ ಫೈನಾನ್ಸ್‌ಗಳು ಒತ್ತಾಯಿಸುವಂತಿಲ್ಲ. ಮನೆಗಳಿಗೆ ಕೀಲಿ ಹಾಕುವ ಅಧಿಕಾರ ನಿಮಗಿಲ್ಲ. ಸಾಲ ಕೊಡುವಾಗ ಅವರ ಆರ್ಥಿಕ ಸ್ಥಿತಿ ನೋಡಿಕೊಂಡು ಸಾಲ ನೀಡಬೇಕು. ಪೊಲೀಸರು ನಿಮ್ಮೊಂದಿಗೆ ಫ್ರೆಂಡ್ಲಿ ಇದ್ದಾರೆ. ವಸೂಲಾತಿಗೆ ಗೂಂಡಾಗಳನ್ನು ನೇಮಿಸುವಂತಿಲ್ಲ ಎಂದು ಹಾಗೂ ಆರ್‌ಬಿಐ ಮಾರ್ಗಸೂಚಿ ಅನ್ವಯ ವ್ಯವಹಾರ ಮಾಡಬೇಕೆಂದು ಖಡಕ್ ಸೂಚನೆ ನೀಡಿದರು. ಮೈಕ್ರೋ ಫೈನಾನ್ಸ್‌ಗಳ ಚಲನವಲನಗಳ ಮೇಲೆ ನಿಗಾ ವಹಿಸಲು ಒಂದು ಸಮಿತಿ ರಚಿಸಲು ಜಿಲ್ಲಾಧಿಕಾರಿಯವರಿಗೆ ಸಂಸದರು ನಿರ್ದೇಶನ ನೀಡಿದರು.