ನವೆಂಬರ್ ವೇಳೆಗೆ ರಾಜ್ಯದಲ್ಲಿ ದೊಡ್ಡ ಬದಲಾವಣೆ; ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಸುಳಿವು

Bommai
Published on

ಹಾವೇರಿ: ರಾಜಕೀಯ ಪರಿವರ್ತನೆ ಕಾಲ ಕರ್ನಾಟಕದಲ್ಲಿ ಶುರುವಾಗಿದೆ. ನವೆಂಬರ್ ವೇಳೆಗೆ ಎಲ್ಲ ಹಂತದಲ್ಲೂ ದೊಡ್ಡ ಬದಲಾವಣೆ ಆಗುತ್ತದೆ. ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಏನು ಇಲ್ಲ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಪರೇಶನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಅಷ್ಟು ಸಂಖ್ಯಾ ಬಲ ನಮಗಿಲ್ಲ. ಆದರೆ, ದೇವರಾಜ ಅರಸು ಅವರು ಇದ್ದಾಗ ಒಂದೇ ದಿನ 86 ಶಾಸಕರು ಗುಂಡೂರಾವ್ ಅವರ ಪರವಾಗಿ ನಿಂತಿದ್ದರು. ವೀರೇಂದ್ರ ಪಾಟೀಲರು ಇದ್ದಾಗ 183ಕ್ಕೆ 183 ಶಾಸಕರೂ ಬೆಂಬಲಿಸಿದ್ದರು. ಈ ರೀತಿಯ ದೊಡ್ಡ ರಾಜಕೀಯ ಬದಲಾವಣೆಯನ್ನು ನಾವೀಗ ನಿರೀಕ್ಷಿಸಬಹುದು ಎಂದು ಬದಲಾವಣೆಯ ಸುಳಿವು ನೀಡಿದರು.
ನಮ್ಮಲ್ಲೇ ಶತೃಗಳಿದ್ದಾರೆ ಎಂಬ ಸಿದ್ದರಾಮಯ್ಯನವರ ಮಾತಿಗೆ ಪ್ರತಿಕ್ರಯಿಸಿದ ಬೊಮ್ಮಾಯಿ, ಈ ವಿಚಾರ ಅವರಿಗೆ ತಡವಾಗಿ ಗೊತ್ತಾಗಿದೆ. ನಾವು ಹಿಂದೆಯೇ ಹೇಳಿದ್ದೆವು. ಈಗ ಅವರ ಅನುಭವಕ್ಕೆ ಬಂದಿದೆ. ಎಲ್ಲವೂ ಸರಿ ಇದೆ ಅಂತಾ ದೋಣಿಯಲ್ಲಿ ಕುಳಿತ್ತಿದ್ದರು. ಈಗ ಕುಂತ ದೋಣಿಯಲ್ಲಿ ತೂತು ಕೊರೆಯುವ ಕೆಲಸ ನಡೆಯುತ್ತಿದೆ. ರಾಜಕೀಯ ಅನುಭವ ಬಳಸಿಕೊಂಡು ಯಾವ ರೀತಿ ಹೋರಾಟ ಮಾಡುತ್ತಾರೆ ಎಂಬುದನ್ನು ನೋಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net