ಮಳೆ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ; ತುರ್ತು ಪರಿಹಾರದ ಹಣ ಬಳಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ

Published on

ಹಾವೇರಿ: ಜಿಲ್ಲೆಯಲ್ಲಿ ಆಗಿರುವ ಮಳೆ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಈ ಕೂಡಲೇ ಜಿಲ್ಲಾಧಿಕಾರಿ ಖಾತೆಯಲ್ಲಿನ 18 ಕೋಟಿ ರೂ. ತುರ್ತು ಹಣವನ್ನು ಬಳಸುವಂತೆ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷೃದಿಂದ ಹಲವು ಅನಾಹುತಗಳು ಆಗಿವೆ. ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಸಾವಿರಾರು ಮನೆಗಳಿಗೆ ನೀರುನುಗ್ಗಿದೆ. ಸಾವಿರಾರು ಹೆಕ್ಟೆರ್ ಬೆಳೆ ಹಾನಿಯಾಗಿದೆ ಎಂದರು.
ಮಳೆಹಾನಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಘೋಷಿಸಬೇಕು. ಮಳೆಹಾನಿ ಸಮೀಕ್ಷೆಯನ್ನು ಸರಿಯಾಗಿ ಸರ್ಕಾರ ಮಾಡಬೇಕು. ಜಿಲ್ಲಾಧಿಕಾರಿ ಖಾತೆಯಲ್ಲಿ ಇರುವ 18 ಕೋಟಿ ರೂ.ಯನ್ನು ಇದಕ್ಕೆ ಬಳಸಿಕೊಳ್ಳಬೇಕು. ಮಳೆಹಾನಿ ಸಂಬಂಧ ಜಿಲ್ಲಾಧಿಕಾರಿ ಜತೆ ನಾನು ಚರ್ಚಿಸಿದ್ದೇನೆ. ಈಗಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕೇ ಹೊರತು ತುರ್ತು ಪರಿಹಾರದ ಹಣವನ್ನು ಕನ್ನಡಿಯೊಳಗಿನ ಗಂಟಿನಂತೆ ಮಾಡಬಾರದು. ಮೇಲ್ನೋಟಕ್ಕಷ್ಟೇ ಮಳೆ ಹಾನಿಯನ್ನು ಪರಿಶೀಲಿಸಬಾರದು ಎಂದು ಸೂಚಿಸಿದರು.
ಯುಟಿಪಿ ಕಾಲುವೆ ಸಂಪೂರ್ಣವಾಗಿ ಪೂರ್ಣಗೊಳಿಸದ ಕಾರಣ ಕಾಲುವೆಗೆ ಹಳ್ಳದ ನೀರು ನುಗ್ಗಿ ಅನಾಹುತ ಸಂಭವಿಸುತ್ತಿದೆ. ಇದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳೇ ಕಾರಣ. ಕೆನಾಲ್‌ನಲ್ಲಿ ನೀರು ಬರದಂತೆ ಕೂಡಲೇ ತಾತ್ಕಾಲಿಕವಾಗಿ ವಡ್ಡುಕಟ್ಟಿ, ಬಳಿಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net