

ಹಾವೇರಿ: ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು, ಪೊಲೀಸರನ್ನು ಎತ್ತಂಗಡಿ ಮಾಡಿರುವುದು ಸರಿಯಾದ ಕ್ರಮವಲ್ಲ. ಇದೊಂದು ಬುದ್ದಿ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರ. ಇಂತಹ ಸರ್ಕಾರವನ್ನು ಎಂದೂ ನೋಡಿರಲಿಲ್ಲ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹಾವೇರಿಯ ಸಂಸದರ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣಕ್ಕೆ ಸಚಿವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ನೇರ ಹೊಣೆಗಾರರು ಎಂದರು.
ಆರ್‌ಸಿಬಿ ಮ್ಯಾಚ್ ಗೆದ್ದ ದಿನ ರಾತ್ರಿಯಿಡಿ ಅಭಿಮಾನಿಗಳು ವಿಜಯೋತ್ಸವ ಮಾಡಿದ್ದಾರೆ. ಅದಕ್ಕೆ ಪೊಲೀಸರು ಬಂದೋಬಸ್ತ್ ನೀಡಿದ್ದಾರೆ. ಬೆಳಗ್ಗೆ ತರಾತುರಿಯಲ್ಲಿ ವಿಜಯೋತ್ಸವ ಹಮ್ಮಿಕೊಂಡಿದ್ದು, ಪೊಲೀಸರು ಯಾವ ರೀತಿ ಭದ್ರತೆ ನೀಡಬೇಕು. ಇವರೇನು ಒಲಿಂಪಿಕ್ ಗೆದ್ದು ಬಂದಿದ್ದಾರಾ? ಆಯೋಜಕರು ಸಹ ಬೇಜವಾಬ್ದಾರಿ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದು ಈ ಅನಾಹುತಕ್ಕೆ ಕಾರಣ. ಈ ಸರ್ಕಾರ ರಾಜ್ಯವನ್ನು ಆಡಳಿತ ಮಾಡಲು ಅರ್ಹತೆ ಇಲ್ಲ. ಇಡೀ ಕಾರ್ಯಕ್ರಮ ಗೊಂದಲಮಯವಾಗಿತ್ತು. ಅವರ ಚೇಲಾಗಳೇ ವೇದಿಕೆಯಲ್ಲಿದ್ದರು. ಕ್ರಿಡಾಂಗಣದ ಹೊರಗಡೆ ಸಾವಿನ ಸುದ್ದಿ ಬಂದರೂ ಕಾರ್ಯಕ್ರಮ ಮುಂದುವರೆಸಿದ್ದಾರೆ. ಒಂದುಕಡೆ ವಿಜಯೋತ್ಸವ, ಇನ್ನೊಂದು ಶವಯಾತ್ರೆ ಮಾಡಿದ್ದಾರೆ. ಇದೊಂದು ಸರ್ಕಾರನಾ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, 11 ಜನರು ಸತ್ತರೂ ನಾವು ಕೇಳಬಾರದಾ ? ಕೆಎಸ್‌ಸಿಎ ಮೇಲೆ ಕೇಸ್ ಆಗಿದ್ದು ಸರಿ ಇದೆ. ಅದರೆ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ಸರ್ಕಾರ ವಿಫಲವಾಗಿದೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಹೇಳಿದರು.