ಸಂಕ್ರಾಂತಿಯೊಳಗೆ ಸಿಎಂ ತಜ್ಞರ ಸಭೆ ಕರೆಯಲಿ; 12ರಂದು ಮೋಟೆಬೆನ್ನೂರ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ; ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Basava Jaya Mrutyunjaya swamiji
Published on

ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.12ರಂದು ಬೆಳಗ್ಗೆ 10 ಗಂಟೆಗೆ ಇಷ್ಟಲಿಂಗ ಪೂಜೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ಒಳಗಾಗಿ ಮೀಸಲಾತಿ ಕುರಿತು ತಜ್ಞರ ಸಭೆ ಆಯೋಜಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದೊಳಗೆ ಸಭೆ ಕರೆಯುವುದಾಗಿ ಸಿಎಂ ಭರವಸೆ ನೀಡಿದ್ದರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈಬಿಡಲಾಗಿತ್ತು. ಅವರು ಒಂದು ವಾರ ಕೇಳಿದ್ದರೂ ನಾವು ಜ.20ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದೆವು. ಆದರೂ ಸಿಎಂ ಈವರೆಗೆ ಸಭೆ ಕುರಿತು ಚಿಂತನೆ ನಡೆಸಿಲ್ಲ. ಈ ಸಂಕ್ರಾಂತಿಯೊಳಗೆ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದರು.
ಮೋಟೆಬೆನ್ನೂರ ಇಷ್ಟಲಿಂಗ ಪೂಜೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ, ಲಕ್ಷ್ಮೀ ಹೆಬ್ಬಾಳ್ಕರ, ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಸೇರಿದಂತೆ ಸಮಾಜದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿ.ಆರ್.ಬಳ್ಳಾರಿ, ಭಾರತಿ ಜಂಬಗಿ, ಬಸವರಾಜ ಹಾಲಪ್ಪನವರ, ಶಿವಲಿಂಗಪ್ಪ ಸಾತೇನಹಳ್ಳಿ, ಪ್ರಮೀಳಾ ಜಂಬಗಿ, ಶಂಭಣ್ಣ ಮಾಲದಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net