

ಹಾವೇರಿ: ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯ ನಡುವೆಯೂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ನಗರದಲ್ಲಿ ಗುರುವಾರ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ಬಗೆ ಬಗೆಯ ಪಾಂಜಾಗಳನ್ನು ಹೊತ್ತ ಯುವಕರು ಗಮನ ಸೆಳೆದರು.
ಮೊಹರಂ ಹಬ್ಬದ ಕೊನೆಯ ದಿನವಾದ ಗುರುವಾರ ನಗರದ ಎಲ್ಲ ಮಸೀದಿಗಳಲ್ಲಿ ಬೆಳಗ್ಗೆಯಿಂದಲೇ ಭಕ್ತಿ-ಭಾವದಿಂದ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ದೇವರನ್ನು ಹೊತ್ತು ಪರಸ್ಪರ ಭೇಟಿ ಮಾಡುತ್ತಾ ಪಾಂಜಾ ಹಾಗೂ ಡೋಲಿಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಕೊನೆಯಲ್ಲಿ ಹಿಂದು-ಮುಸ್ಲಿಮರು ಒಂದಾಗಿ ಇಲ್ಲಿನ ಸುಭಾಸ ಸರ್ಕಲ್‌ನಲ್ಲಿ ಜಮಾಯಿಸಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಮೆರವಣಿಗೆಯಲ್ಲಿ ಲಾವಣಿ ಪದ, ಹೆಜ್ಜೆ ಮೇಳ, ಹೆಜ್ಜೆಪದ ಹಾಡುಗಳಿಗೆ ವಿವಿಧ ಭಂಗಿಯ ಹೆಜ್ಜೆ ಹಾಕುತ್ತಾ ದೇವರಗಳನ್ನು ನದಿಗೆ ಕಳುಹಿಸಿದರು. ಹಬ್ಬದ ನಿಮಿತ್ತ ಭಕ್ತರು ಕೆಂಡ ಹಾಯ್ದು ಭಕ್ತಿ ಪ್ರದರ್ಶಿಸಿದರು. ನಗರದ ಕಾಗಿನೆಲೆ ಬಸ್ ನಿಲ್ದಾಣ, ಸುಭಾಸ ವೃತ್ತ, ನಾಗೇಂದ್ರನಮಟ್ಟಿ, ಎಸ್‌ಬಿಐ ಬ್ಯಾಂಕ್ ಬಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಹಟೇಲ್ ಭಾಷಾ, ಬೀಬಿಫಾತಿಮಾ, ಇಮಾಮಿಹುಸೇನ್, ಮೌಲಾಲಿ, ಇಮಾಮಿಹಸನ್ ದೇವರ ಪಾಂಜಾ (ಮೂರ್ತಿ) ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.