ಜಿಲ್ಲೆಯಾದ್ಯಂತ ಮುಹರಮ್ ಸಡಗರ ಜೋರು

29 HVR 9
Published on

ಹಾವೇರಿ: ಹಿಂದು- ಮುಸ್ಲಿಂಮರ ಮಧ್ಯೆ ಭಾವೈಕ್ಯೆಯ ಬೆಸೆಯುವ, ಸಾಮರಸ್ಯದ ಪ್ರತೀಕ, ದ್ವೇಷ, ಅಸೂಯೆ ಬಿಟ್ಟು ಎಲ್ಲರನ್ನೂ ಪ್ರೀತಿಸುವಂತೆ ಮಾಡುವ ಮುಹರ‌್ರಮ್ ಹಬ್ಬವನ್ನು ಜಿಲ್ಲೆಯಾದ್ಯಂತ ಶನಿವಾರ ಸಡಗರದಿಂದ ಆಚರಿಸಲಾಯಿತು.
ಹಾವೇರಿ ನಗರದಲ್ಲಿ ಹಲವರು ಹಬ್ಬವನ್ನು ಭಾನುವಾರ ಆಚರಿಸುತ್ತಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರವೇ ಹಬ್ಬ ಆಚರಿಸಲಾಯಿತು.
ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಹಿಂದು-ಮುಸ್ಲಿಂ ಬಾಂಧವರು ಬೇಧ ಭಾವವಿಲ್ಲದೇ ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಮುಹರ‌್ರಮ್ ಹಬ್ಬ ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ ಪಂಜಾಗಳೊಂದಿಗೆ ಮೆರವಣಿಗೆ ನಡೆಸಿದರು. ಗ್ರಾಮದ ಹಿರಿಯರು ಹಾಗೂ ಯುವಕರು ಮೆರವಣಿಗೆ ಸಂದರ್ಭದಲ್ಲಿ ಅಲಾಬಿ ಪದಗಳನ್ನು ಹಾಡುತ್ತ ಹೆಜ್ಜೆ ಹಾಕಿ ಸಂಭ್ರಮಿಸಿದರು. ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಮನೆಯ ಎದುರು ಡೋಲಿ ಬಂದ ಸಂದರ್ಭದಲ್ಲಿ ಪೂಜೆ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಹೊಳಲಪ್ಪ ಪೂಜಾರ, ರಮೇಶ ಮಡ್ಲೂರ, ಜ್ಯೋತೆಪ್ಪ ಹೊಸಮನಿ, ಬಸವರಾಜ ಬೂಗಟ್ಟಿ, ಶೇಖಪ್ಪ ಕಮತರ, ಮಹಬೂಬಸಾಬ್ ಅಗಸರ, ಹುಸೇನಸಾಬ್ ಪಿಂಜಾರ, ಶಿವಾನಂದ ಮಡ್ಲೂರ, ಹೊನ್ನಮ್ಮ ತಳವಾರ, ಅಲ್ಲಾಭಕ್ಷ ಅಗಸರ, ಶಿವಪ್ಪ ಬಳ್ಳಾರಿ, ಗಂಗಪ್ಪ ಯರೇಶಿಮಿ, ಮಾಂತಪ್ಪ ಹರಿಜನ, ಪಕ್ಕೀರಪ್ಪ ಕಮತರ, ದ್ಯಾಮಣ್ಣ ಬಡಿಗೇರ, ಶಿವಕುಮಾರ ತೊರಗಲ್ಲ, ಖಾದರಸಾಬ್ ಅಗಸರ, ಮಹೇಶ ಹನ್ನೀರ, ಮತ್ತಿತರರು ಪಾಲ್ಗೊಂಡಿದ್ದರು.
ಪಂಜಾಗಳ ಮೆರವಣಿಗೆ
ಯುವಕರು ಪಂಜಾಗಳನ್ನು ಹಿಡಿದು ಗ್ರಾಮದಲ್ಲಿ ಮೆರಣಿಗೆ ನಡೆಸಿದರು. ಪಂಜಾಗಳಿಗೆ ಜನರು ನಮಸ್ಕರಿಸಿದರು. ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂಮರು ಸಾರ್ವಜನಿಕರಿಗೆ ಪಾನಕ ವಿತರಿಸಿದರು. ಹಬ್ಬದ ನಿಮಿತ್ತ ಕೆಲವರು ಹುಲಿ ವೇಷ ಧರಿಸಿ ಹೆಜ್ಜೆ ಹಾಕಿದರು. ಪಂಜಾಗಳನ್ನು ಹಿಡಿದ ಕೆಲವರು ಬೆಂಕಿ ಹಾಯ್ದದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net