

ಹಾವೇರಿ: ವರದಾ ನದಿ ನೀರು ನುಗ್ಗಿ ಬೆಳೆ ಹಾನಿಗೀಡಾಗಿರುವ ಪ್ರದೇಶಗಳಿಗೆ ಹಾಗೂ ಮನೆಯ ಮೇಲ್ಛಾವಣಿ ಕುಸಿದು ನಾಲ್ವರು ಮೃತಪಟ್ಟಿರುವ ಸವಣೂರ ತಾಲೂಕಿನ ಮಾದಾಪುರ ಗ್ರಾಮಕ್ಕೆ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಗುರುವಾರ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಇತ್ತೀಚೆಗೆ ಮೇಲ್ಛಾವಣಿ ಕುಸಿದು ಬಿದ್ದು ನಾಲ್ವರು ಮೃತಪಟ್ಟಿದ್ದ ಹರಕುಣಿಯವರ ಮನೆಗೆ ಭೇಟಿ ನೀಡಿದ ಸಲೀಂ ಅಹ್ಮದ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂ. ಸಹಾಯ ಮಾಡಿದರು. ಸರ್ಕಾರದ ವತಿಯಿಂದ ಅವರಿಗೆ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ತಹಸೀಲ್ದಾರ್‌ಗೆ ಸೂಚಿಸಿದರು.
ಬಳಿಕ ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿಯ ಹಳೆಯ ಸೇತುವೆ ಬಳಿ ಆಗಮಿಸಿ ನದಿಯ ಅಕ್ಕಪಕ್ಕದ ಜಲಾವೃತಗೊಂಡ ಜಮೀನುಗಳನ್ನು ವೀಕ್ಷಿಸಿದರು. ನಂತರ ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಾಗನೂರು- ಕೂಡಲ ಗ್ರಾಮದ ಸಂಪರ್ಕ ಸೇತುವೆ ತುಂಬಿ ಹರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ನಿರ್ಮಾಣ ಹಂತದಲ್ಲಿರುವ ಸೇತುವೆ ಹಾಗೂ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡಿರುವುದನ್ನು ಪರಿಶೀಲಿಸಿದರು.
ನಾಗನೂರು ಗ್ರಾಮದಲ್ಲಿ ವರದಾ ನದಿ ನೀರು ನುಗ್ಗುವ ನದಿಪಾತ್ರದ ಮನೆಗಳ ಸ್ಥಳಾಂತರಿಸಲು ಜಾಗೆ ಗುರುತಿಸಲಾಗಿದ್ದು, ದರ ನಿಗದಿ ಸಂಬಂಧ ಶೀಘ್ರವೇ ಸಭೆ ನಡೆಸಲಾಗುವುದು. ಬೆಳೆಹಾನಿ ಬಗ್ಗೆ ಸಮೀಕ್ಷಾ ಕಾರ್ಯ ನಡೆದಿದೆ ಎಂದು ತಹಸೀಲ್ದಾರ್ ಶಂಕರ ಜಿ.ಎಸ್. ಮಾಹಿತಿ ನೀಡಿದರು.
ಮಳೆಯಿಂದ ಮರ ಬಿದ್ದು ಮೃತಪಟ್ಟಿದ್ದ ಹಿರೇಕೆರೂರ ತಾಲೂಕಿನ ಚಿನ್ನಮುಳಗುಂದ ಗ್ರಾಮದ ಹೆಸ್ಕಾಂನ ಹೊರ ಗುತ್ತಿಗೆ ನೌಕರ ಮಂಜುನಾಥ ಪುಟ್ಟಲಿಂಗಣ್ಣನವರ ಮನೆಗೆ ಹಾಗೂ ರಟ್ಟೀಹಳ್ಳಿ ತಾಲೂಕಿನ ಯತ್ತಿನಹಳ್ಳಿ ಎಂ.ಎ.ಹನುಮಂತಪ್ಪ ನಾಮದೇವ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ತಲಾ 25 ಸಾವಿರ ರೂ., ನೆರವು ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಯು.ಬಿ.ಬಣಕಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ, ಯಾಸೀರ್‌ಖಾನ್ ಪಠಾಣ, ಪ್ರಕಾಶಗೌಡ ಪಾಟೀಲ, ಜಮೀರ್ ಜಿಗರಿ, ಇತರರಿದ್ದರು.
ಅಧಿಕಾರಿಗಳಿಗೆ ಖಡಕ್ ಸೂಚನೆ
ಮಳೆಯಿಂದ ಬಿದ್ದಿರುವ ಮನೆಗಳ ಕುರಿತು ಅಧಿಕಾರಿಗಳು ನಿಖರ ಮಾಹಿತಿ ಪಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಸ್ಥಳೀಯ ಅಧಿಕಾರಿಗಳು ಯಾವುದೇ ತಪ್ಪುಗಳಿಗೆ ಅವಕಾಶ ನೀಡದೇ ಮನೆ ಬಿದ್ದಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮಾನವೀಯತೆ ದೃಷ್ಠಿಯಿಂದ ಸರ್ಕಾರದ ಪರಿಹಾರ ದೊರಕಿಸಿಕೊಡಬೇಕು ಎಂದು ಸಲೀಂ ಅಹ್ಮದ್ ಸೂಚನೆ ನೀಡಿದರು.