ರಸ್ತೆಗುಂಡಿ ಮುಚ್ಚಲು ಸಿಎಂ ಆದೇಶಿಸಿದ್ದಾರೆ; ವಿಧಾನ ಪರಿಷತ್ ಮುಖ್ಯ ಸಚೇತನ ಸಲೀಂ ಅಹ್ಮದ್

Saleem Ahmed
Published on

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಶಾಸಕರ, ಅಧಿಕಾರಿಗಳ ಸಭೆ ನಡೆಸಿ ರಾಜ್ಯ ಎಲ್ಲ ಜಿಲ್ಲೆಗಳಲ್ಲೂ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಹಾಗೂ ರಸ್ತೆ ಕಾಮಗಾರಿ ನಡೆಸಲು ಕರೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತನ ಸಲೀಂ ಅಹ್ಮದ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲ ಮಳೆ ಹೆಚ್ಚಾದ ಕಾರಣ ರಸ್ತೆಗಳು ಹಾಳಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ತಲಾ 50 ಕೋಟಿ ರೂ. ಅನುದಾನ ಕೊಡಲಾಗುತ್ತಿದೆ. ಈ ಹಣ ಬಿಡುಗಡೆ ಆದ ಕೂಡಲೇ ದುರಸ್ಥಿ ಕಾಮಗಾರಿ ಆರಂಭವಾಗಲಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಮಾಡುವಾಗ ಎಐಸಿಸಿ ವೀಕ್ಷಕರ ನೇಮಕ ಮಾಡಲಾಗುವುದು. ಸಿಇಸಿ ಸೆಂಟ್ರಲ್ ಕಮಿಟಿಯಲ್ಲೂ ಜಿಲ್ಲಾಧ್ಯಕ್ಷರನ್ನು ಸೇರಿಸುವ ನಿರ್ಧಾರವನ್ನು ರಾಹುಲ್ ಗಾಂಧೀ ಮಾಡಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕ ಪಾರದರ್ಶಕವಾಗಿರಬೇಕು. ಪ್ರತಿಯೊಬ್ಬ ಕಾರ್ಯಕರ್ತರ ಸಲಹೆ ಪಡೆಯಬೇಕು ಎಂಬ ಸೂಚನೆ ಸಿಕ್ಕಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷ ಸಜ್ಜಾಗಿದೆ. ಒಂದು ವರ್ಷ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಎಂಬ ಎರಡು ಬಣಗಳಿವೆ. ಅದಕ್ಕಾಗಿ ಪವರ್ ಹಂಚಿಕೆ ಪಾಲಿಟಿಕ್ಸ್ ನಡೆದಿದೆ ಎಂಬ ಬೊಮ್ಮಾಯಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ಮೊದಲು ಬಿಜೆಪಿ ತನ್ನ ಪಕ್ಷ ಸರಿಪಡಿಸಿಕೊಳ್ಳಲಿ. ಕಾಂಗ್ರೆಸ್‌ನಲ್ಲಿ ಎಲ್ಲ ಸರಿಯಾಗಿದೆ. ಅದಕ್ಕಾಗಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು ಸಲೀಂ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಡಿ.ಬಸವರಾಜ, ಡಾ.ಸಂಜಯ ಡಾಂಗೆ, ಎಂ.ಎಂ.ಹಿರೇಮಠ, ಎಂ.ಎಂ.ಮೈದೂರ, ಇತರರಿದ್ದರು.

ಈ ಸಲ ಖಚಿತವಾಗಿಯೂ ಹೈಕಮಾಂಡ್ ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ 

ಬಿಹಾರ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತದೆ. ಆಗ ಹೊಸಬರಿಗೆ ಸಚಿವ ಸ್ಥಾನ ಸಿಗಲಿದೆ. ಈಗಿರುವ ಕೆಲ ಸಚಿವರಿಗೆ ಪಕ್ಷ ಸಂಘಟನೆಗೆ, ಪಕ್ಷ ಸಂಘಟನೆ ಮಾಡಿರುವ ಹಳಬರಿಗೆ ಸಚಿವ ಸ್ಥಾನದ ಅವಕಾಶ ಕೊಡುವ ಚಿಂತನೆಯನ್ನು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಡೆಸಿದೆ. ಕಳೆದ ಬಾರಿ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ ಹಾಗೂ ನಾನು ನಾಲ್ವರು ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದೇವೆ. ಮೊದಲ ಬಾರಿ ಪಟ್ಟಿಯಲ್ಲಿ ಮೂವರ ಜತೆಗೆ ನನ್ನ ಹೆಸರೂ ಇತ್ತು. ಯಾವ ಕಾರಣಕ್ಕೆ ಬಿಟ್ಟು ಹೋಯಿತು ಗೊತ್ತಿಲ್ಲ. ಈ ಸಲ ಖಚಿತವಾಗಿಯೂ ಹೈಕಮಾಂಡ್ ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಸಲೀಂ ಅಹ್ಮದ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net