

ಹಾವೇರಿ: ಗ್ಯಾರಂಟಿ ಯೋಜನೆಗಳನ್ನು ಕೇವಲ ಚುನಾವಣೆ ಉದ್ದೇಶಕ್ಕಾಗಿ ಮಾಡಿಲ್ಲ. ರಾಜ್ಯದ ಜನರ ಸಂಕಷ್ಟ ನೋಡಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ರೂಪಿಸಿದೆ. ಇದಕ್ಕೆ ಜನಮನ್ನಣೆಯೂ ಸಿಕ್ಕಿದೆ. ಪಕ್ಷದ 9 ಅಭ್ಯರ್ಥಿಗಳ ಗೆಲುವಿನಲ್ಲಿ ಗ್ಯಾರಂಟಿ ಪಾತ್ರವೂ ಇದೆ. ಹಾಗಾಗಿ, ಗ್ಯಾರಂಟಿ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಭರವಸೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಕಾಂಗ್ರೆಸ್‌ನ ಕೆಲವರೇ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 9 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ವಿಜೇತರಾಗಿದ್ದಾರೆ. ಹಾವೇರಿ, ಚಿತ್ರದುರ್ಗ, ಬೆಂಗಳೂರು ಸೆಂಟ್ರಲ್ ಸೇರಿ ನಾಲ್ಕೈದು ಕಡೆ ಅಲ್ಪ ಮತಗಳ ಅಂತರದಿಂದ ಸೋತಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದರು.
ಕೆಪಿಸಿಸಿ ಈಗಾಗಲೇ ಚರ್ಚೆ ನಡೆಸಿದೆ. ಯಾವ ಕ್ಷೇತ್ರದಲ್ಲಿ ಯಾವ ಕಾರಣಕ್ಕೆ ಸೋಲಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಹಾವೇರಿ ಕ್ಷೇತ್ರದಲ್ಲಿ ಯಾವ ನಾಯಕರೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಶಿಸ್ತು ಕ್ರಮದ ಬಗ್ಗೆ ಚರ್ಚೆ ಆಗಿಲ್ಲ. ಆ ಬಗ್ಗೆ ಕೆಪಿಸಿಸಿ ತೀರ್ಮಾನಿಸಲಿದೆ.
ಲೋಕಸಭಾ ಚುನಾವಣೆ ಮೂಲಕ ದೇಶದ ಜನತೆ ಒಂದು ಸಂದೇಶ ಕೊಟ್ಟಿದ್ದಾರೆ. ದುರಹಂಕಾರಿ ಕೇಂದ್ರ ಸರ್ಕಾರಕ್ಕೆ ಬಹುಮತ ಕೊಟ್ಟಿಲ್ಲ. ಎನ್‌ಡಿಎ ಕಿಚಡಿ ಸರ್ಕಾರ ರಚನೆಯಾಗಿದ್ದು, ಹೆಚ್ಚು ದಿನ ಇದು ಬಾಳಲ್ಲ. ಚಾರ್ ಸೌ ಪಾರ್ ಅಲ್ಲ 250 ದಾಟಲೂ ಬಿಜೆಪಿಗೆ ಆಗಲಿಲ್ಲ. ಮೋದಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಸಂವಿಧಾನ ಬದಲಾವಣೆ ಮಾತಿಗೆ ಜನ ಸಂದೇಶ ಕೊಟ್ಟಿದ್ದಾರೆ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ 100 ರೂ. ದಾಟಿದಾಗ ಯಾರೂ ಕೇಳಲಿಲ್ಲ. ಗ್ಯಾರಂಟಿ ನಿಲ್ಲಿಸುವ ಉದ್ದೇಶದಿಂದ ಬಿಜೆಪಿ ಹುನ್ನಾರ ನಡೆಸಿದೆ. ಬಿಜೆಪಿಯವರು ಟೀಕೆ ಮಾಡುವುದು ಬಿಟ್ಟು ಒಳ್ಳೆಯ ಕಾರ್ಯಕ್ರಮ ಸ್ವಾಗತಿಸಲಿ. ನಿಗಮ ಮಂಡಳಿಯಲ್ಲಿ ಅಹಿಂದ ವರ್ಗ ಕಡೆಗಣನೆ ಆರೋಪದ ಕುರಿತು ಉತ್ತರಿಸಿದ ಅವರು, ಇನ್ನೂ ಸಂಪೂರ್ಣವಾಗಿ ನೇಮಕಾತಿ ಆಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಸಮಾಜವನ್ನೂ ಪರಿಗಣಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ನೆಹರು ಓಲೇಕಾರ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಎಂ.ಎಂ.ಹಿರೇಮಠ, ಎಂ.ಎಂ.ಮೈದೂರ, ಡಿ.ಬಸವರಾಜ, ಬಸವರಾಜ ಹೆಡಿಗೊಂಡ, ಇತರರಿದ್ದರು.
ಉಪಚುನಾವಣೆ ಗೆಲುವು ನಮ್ಮದೇ
ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರ ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ತಯಾರಿ ಮಾಡಲಾಗುತ್ತಿದ್ದು, ಮೂರೂ ಕಡೆಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್‌ಗೆ ಡಿಮಾಂಡ್ ಇದೆ. ಬಿಜೆಪಿ ಟಿಕೆಟ್‌ಗೆ ಡಿಮಾಂಡ್ ಇಲ್ಲ. ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಂಟು ಸಾವಿರ ಓಟು ಲೀಡ್ ಬಂದಿದೆ. ಶಿಗ್ಗಾಂವಿಯಿಂದ ಸಲೀಂ ಅಹ್ಮದ್ ಅಭ್ಯರ್ಥಿ ಗುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಲೀಂ ಅಹ್ಮದ್, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಷ್ಟೇ ಹೇಳಿದರು.