

ಹಾವೇರಿ: ಸಿಎಂ ಖುರ್ಚಿಯೂ ಖಾಲಿ ಇಲ್ಲ, ಡಿಸಿಎಂ ಖುರ್ಚಿಯೂ ಖಾಲಿ ಇಲ್ಲ. ಸರ್ಕಾರಕ್ಕೆ, ಪಕ್ಷಕ್ಕೆ ಮುಜುಗುರ ಆಗುವಂತಹ ಯಾವುದೇ ಹೇಳಿಕೆಯನ್ನು ಯಾರೂ ಕೊಡಬಾರದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆಗೆ ಏನೂ ಹೇಳಲು ಆಗುವುದಿಲ್ಲ. ಈಗ ಸಿದ್ದರಾಮಯ್ಯ ಸಿಎಂ ಇದ್ದಾರೆ. ಸ್ವಾಮೀಜಿಗಳು ಅದು ನನ್ನ ವೈಯಕ್ತಿಕ ಹೇಳಿಕೆ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾವು ಸರ್ಕಾರದ ಅಂಗವಾದ್ದರಿಂದ ಜಾಗೃತೆಯಿಂದ ಮಾತನಾಡಬೇಕು ಎಂದರು.
ಸರ್ಕಾರ ಬೀಳುತ್ತದೆ ಎನ್ನುವ ಸಂಸದ ಬಸವರಾಜ ಬೊಮ್ಮಾಯಿ ಅವರದು ಹಗಲುಕನಸು. ಬಿಜೆಪಿಯವರು ಮೊದಲು ಅವರ ಕೇಂದ್ರ ಸರ್ಕಾರವನ್ನು ರಕ್ಷಣೆ ಮಾಡಿಕೊಳ್ಳಲಿ. ಐದು ವರ್ಷ ನಮ್ಮ ಸರ್ಕಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನಾಯಕತ್ವದಲ್ಲಿ ನಡೆಯುತ್ತದೆ. ಯಾವ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದರು.