

ಹಾವೇರಿ: ಜಿಲ್ಲೆಯ ನಿರುದ್ಯೋಗಿ ಯುವಕ- ಯುತಿಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಾ.3ರಂದು ನಗರದ ಶಿವಲಿಂಗೇಶ್ವರ ಮಹಿಳಾ ಕಾಲೇಜು ಆವರಣದಲ್ಲಿ ಜಿಲ್ಲಾ ಉದ್ಯೋಗ ಮೇಳ ಆಯೋಜಿಸಲಾಗಿದೆ. 30ಕ್ಕೂ ಅಧಿಕ ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಚೇಂಬರ್ ಆಫ್ ಕಾಮರ್ಸ್, ಕೈಗಾರಿಕಾ ಸಂಸ್ಥೆ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸಹಯೋಗ ನೀಡಿವೆ. ಅಭ್ಯರ್ಥಿಗಳ ನೋಂದಣಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಆಕಾಂಕ್ಷಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ಪ್ರತ್ಯೇಕ ಅಂತರ್ಜಾಲ ಠಿಠಿ://ಛ್ಟಿಜ್ಜಿಟಚ್ಛಿಜ್ಟಿ2024.್ಚಟಞ ತೆರೆಯಲಾಗಿದೆ. ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಅಂದಾಜು ಎರಡು ಸಾವಿರ ಉದ್ಯೋಗಗಳು ದೊರೆಯುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಸ್.ಎ.ವಜ್ರಕುಮಾರ, ಕೌಶಲಾಧಿಕಾರಿ ಹುಲಿರಾಜ, ಅಭಿಯಾನ ವ್ಯವಸ್ಥಾಪಕ ಸಂಜೀವಕುಮಾರ, ಇತರರಿದ್ದರು.
ಎಫ್‌ಎಸ್‌ಎಲ್ ವರದಿಯಿಂದ ಸತ್ಯ ಗೊತ್ತಾಗಲಿದೆ
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿ ಸತ್ಯಶೋಧನೆ ನಡೆಯುತ್ತಿದೆ. ಎಫ್‌ಎಸ್‌ಎಲ್ ವರದಿ ಬರಲಿ, ಅದರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೋ ಇಲ್ಲವೋ ಎಂಬುದು ಗೊತ್ತಾಗುತ್ತೆ. ಒಂದು ವೇಳೆ ಹಾಗೆ ಕೂಗಿದ್ದು ನಿಜವಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಆಗಲಿದೆ. ಯಾರಿಗೂ ಬೆಂಬಲಿಸುವುದಿಲ್ಲ. ಲೋಕಸಭೆಗೆ ಇತ್ತೀಚೆಗೆ ಪಾಸ್ ತೆಗೆದುಕೊಂಡು ಹೋದವರು ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕಾರಣಿಗಳ ಬಳಿ ಕಳ್ಳರು, ಸುಳ್ಳರು ಎಲ್ಲರೂ ಬರುತ್ತಾರೆ. ಪೋಟೋ ತೆಗೆಸಿಕೊಳ್ಳುತ್ತಾರೆ. ನಮಗೂ ಸಹ ಒಂದೊಂದು ಸಲ ನುಂಗಲಾರದ ತುತ್ತಾಗುತ್ತದೆ ಎಂದು ರುದ್ರಪ್ಪ ಲಮಾಣಿ ಹೇಳಿದರು.
ಮೋಡಬಿತ್ತನೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಖಾಸಗಿ ಬಿಲ್. ಸದನದಲ್ಲಿ ಸಾಧಕ- ಬಾದಕಗಳ ಕುರಿತು ಚರ್ಚಿಸಿ ನಂತರ ರಾಜ್ಯಪಾಲರಿಗೆ ಕಳುಹಿಸಲಾಗುವುದು. ತಾಂತ್ರಿಕತೆಯನ್ನು ಇನ್ನೂ ಉತ್ತಮಪಡಿಸಿ ರೈತರಿಗೆ ಅನುಕೂಲವಾಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ ಎಂದರು.