50 ಕೋಟಿ ಕೊಡಿಸಲು ಸುರ್ಜೇವಾಲಾ ಬಳಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಬೇಡಿಕೆ

Rudrappa Lamani
Published on

ಹಾವೇರಿ: ಹಾವೇರಿ ನಗರದ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ 25 ಕೋಟಿ ರೂ. ಹಾಗೂ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು 25 ಕೋಟಿ ರೂ. ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಬಳಿ ಮನವಿ ಮಾಡಿದ್ದೇನೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇವು ಎರಡೂ ಬಹಳ ಹಳೆಯ ಯೋಜನೆಗಳು. ಇವು ಇನ್ನೂ ಜನರಿಗೆ ಮುಟ್ಟಿಲ್ಲ. ನೀರು, ಚರಂಡಿ ಸಮಸ್ಯೆ ಬಗೆಹರಿಸುವುದಾಗಿ ಜನರಿಗೆ ಮಾತು ಕೊಟ್ಟಿದ್ದೇನೆ. ಹಾಗಾಗಿ, ಅನುದಾನ ಕೊಡುವಂತೆ ಕೋರಿದ್ದೇನೆ. ಈ ಕುರಿತು ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ, ಬಿಡುಗಡೆ ಮಾಡಿಸುವುದಾಗಿ ಸುರ್ಜೇವಾಲಾ ಭರವಸೆ ನೀಡಿದ್ದಾರೆ ಎಂದರು.

ನೀವು ಸ್ವತಃ ಮುಖ್ಯಮಂತ್ರಿ ಅವರನ್ನೇ ಕೇಳಿದ್ದರೆ ಅನುದಾನ ಕೊಡುತ್ತಿರಲಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರುದ್ರಪ್ಪ, ಸಿಎಂ, ಸಚಿವರು ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಇದು ಬಹಳ ಹಳೆಯ ಯೋಜನೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗುತ್ತಿಗೆದಾರರ ಕೇಸ್ ಕೋಲ್ಕತ್ತ, ಬೆಂಗಳೂರು ಹೈಕೋರ್ಟ್‌ನಲ್ಲಿ ನಡೆದಿದೆ. ಅದಕ್ಕಾಗಿ ವಿಶೇಷ ಪ್ರಾಶಸ್ತ್ಯ ಕೊಟ್ಟು ಶೀಘ್ರದಲ್ಲೇ ನೀರು ಕೊಡಿಸಲು ವಿನಂತಿಸಿರುವೆ ಎಂದರು.

ತಮಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚಿಸಿದ್ದೇನೆ. ಲಂಬಾಣಿ ಸಮುದಾಯದ ಏಕೈಕ ಶಾಸಕನಾಗಿರುವ ನನಗೆ ಸಚಿವ ಸ್ಥಾನ ಕೊಡಬೇಕಾದದ್ದು ಪಕ್ಷ ಮತ್ತು ಹೈಕಮಾಂಡ್ ಕರ್ತವ್ಯ. ಅದು ಅವರಿಗೆ ಬಿಟ್ಟದ್ದು. ಸಚಿವ ಸ್ಥಾನಕ್ಕಿಂತ ಹೆಚ್ಚಿನ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಇದರಲ್ಲಿ ಖುಷಿ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net