

ಹಾವೇರಿ: ಖಾಸಗಿ ಕಂಪನಿಗಳು ಸರ್ಕಾರಿ ಕಾಲೇಜುಗಳಿಗೆ ಆಗಮಿಸಿ ನೇರ ಸಂದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂತಹ ಮೇಳಗಳಿಂದ ಗ್ರಾಮಾಂತರ ಪ್ರದೇಶಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಆಯೋಜಿಸಿದ್ದ ಮಿನಿ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕಂಪನಿಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ಹೆಚ್ಚು ಸಂಬಳವನ್ನು ನೀಡಿ ಅವರ ಜೀವನಕ್ಕೆ ಭದ್ರತೆ ನೀಡಬೇಕು. ಜಿಲ್ಲೆಯ ನಿರುದ್ಯೋಗಿಗಳು ಇಂತಹ ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ 23 ಕಂಪನಿಗಳು ಭಾಗವಹಿಸಿದ್ದವು. 300ಕ್ಕೂ ಅಧಿಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಡಾ.ಡಿ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಚೇತನ ಕುಮಾರ, ಡಾ.ಎಂ.ಎಚ್. ಹೆಬ್ಬಾಳ, ಡಾ.ಚಂದ್ರಪ್ರಭಾ ಪಟಗಾರ ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಸಿ.ಇಂಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಸ್ವಾಗತಿಸಿದರು, ನಯನಾ ವಂದಿಸಿದರು. ಪ್ರತಿಭಾ ನಿರೂಪಿಸಿದರು.