ಸಿಎಂ ವಿರುದ್ಧ ಓಲೇಕಾರ 1,500 ಕೋಟಿ ರೂ. ಹಗರಣದ ಆರೋಪ

MLA Olekar
Published on

ಹಾವೇರಿ: ತುಂತುರು ನೀರಾವರಿ ಯೋಜನೆ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 1,500 ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ. ಈ ಕುರಿತು ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಶಾಸಕ ನೆಹರು ಓಲೇಕಾರ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ನೆಹರು ಓಲೇಕಾರ ಅವರಿಗೆ ಹಾವೇರಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿಸಿ ಗವಿಸಿದ್ದಪ್ಪ ದ್ಯಾಮಣ್ಣವರಗೆ ಘೋಷಿಸಿದ್ದದರಿಂದ ಅಸಮಾಧಾನಗೊಂಡಿರುವ ಶಾಸಕ ನೆಹರು ಓಲೇಕಾರ ಹಾಗೂ ನೂರಾರು ಬೆಂಬಲಿಗರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕಾರ, ಸಿಎಂ ಬೊಮ್ಮಾಯಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನನ್ನ ಬೆಳವಣಿಗೆ ಸಹಿಸದೇ ನನಗೆ ಟಿಕೆಟ್ ನೀಡಿಲ್ಲ. ತುಂತುರು ನೀರಾವರಿ ಹಗರಣದಲ್ಲಿ ಸಿಎಂ ಬೊಮ್ಮಾಯಿ 1,500 ಕೋಟಿ ಕೊಳ್ಳೆ ಹೊಡೆದಿದ್ದಾರೆ. ರೈತರಿಗೆ ಒಂದು ಪೈಪ್ ಕೂಡ ನೀಡಿಲ್ಲ. ತುಂತುರು ನೀರಾವರಿ ಯೋಜನೆ ಶಿಗ್ಗಾಂವಿ ಕ್ಷೇತ್ರದ ಜನರಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಇತರ ಜಿಲ್ಲೆಯ, ತಾಲೂಕಿನ ರೈತರಿಗೆ ಈ ಯೋಜನೆಯಿಂದ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಓಲೇಕಾರ ಆರೋಪಿಸಿದರು. ಬೊಮ್ಮಾಯಿ ಧಮ್ಮು, ತಾಕತ್ತು ಎಷ್ಟಿದೆ ತೋರಿಸಲಿ. ನಾವು ಕೂಡ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net