ಹಾವೇರಿ: ರೈತರು ಕಾಲ ಕಾಲಕ್ಕೆ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಚೇರಿ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಆಯೋಜಿಸಿದ್ದ 4ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅ.25ರವರೆಗೆ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ ಸಂತಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 3.06 ಲಕ್ಷ ಜಾನುವಾರುಗಳಿವೆ. 4ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಕಾಲುಬಾಯಿ ಬೇನೆ ರೋಗದ ಲಸಿಕೆ ಹಾಕಲಿದ್ದಾರೆ ಎಂದರು.
ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ. ಜಿಲ್ಲೆಗೆ ಈಗಾಗಲೇ 3,46,600 ಡೋಸ್ ಲಸಿಕೆ ಸರಬರಾಜಾಗಿದ್ದು, ಸದರಿ ಲಸಿಕೆಯನ್ನು ತಾಲ್ಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮರು ಹಂಚಿಕೆ ಮಾಡಲಾಗಿರುತ್ತದೆ. ಜಿಲ್ಲೆಗೆ ಸರಬರಾಜಾದಂತಹ ವ್ಯತಿರಿಕ್ತ ಪರಿಣಾಮಗಳ ನಿರ್ವಹಣೆಗೆ ಅವಶ್ಯವಿರುವ ತುರ್ತು ಔಷಧಿ/ರಾಸಾಯನಿಕಗಳನ್ನು ಹಂಚಿಕೆ ಮಾಡಿ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.