

ಹಾವೇರಿ: ದುಡಿಯುವ ಕೈಗಳು ಹೆಚ್ಚಾದರೆ ದೇಶ ಆರ್ಥಿಕವಾಗಿ ಅಭಿವೃದ್ಧಿ ಆಗುವ ಜತೆಗೆ ವಿಶ್ವಗುರು ಆಗಲು ಸಾಧ್ಯವಾಗುತ್ತದೆ. ಹಾಗಾಗಿ, ಕೃಷಿ, ತೋಟಗಾರಿಕೆ, ಕೈಗಾರಿಕೆ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಅವುಗಳ ಬಗ್ಗೆ ತಿಳಿದುಕೊಂಡು ಸ್ವಂತ ಉದ್ಯಮಗಳನ್ನು ಆರಂಭಿಸಿ ಸದೃಢ ದೇಶ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯ ಯುವನಿಧಿ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಆಯೋಜಿಸಿದ್ದ ಅರಿವು ಉದ್ಯೋಗವಕಾಶಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದಿನೊಂದಿಗೆ ಕೌಶಲ ತರಬೇತಿ ಪಡೆದುಕೊಳ್ಳಬೇಕು. ತಂತ್ರಜ್ಞಾನ ಯುಗದಲ್ಲಿ ಕೌಶಲದ ತರಬೇತಿ ಅಗತ್ಯವಾಗಿದೆ. ಯುವಸಮೂಹ ತಂತ್ರಜ್ಞಾನ ಸರಿಯಾಗಿ ಬಳಸಿಕೊಂಡು ಹಾಗೂ ಯುವನಿಧಿ ಹಣವನ್ನು ಕೌಶಲ ತರಬೇತಿಗೆ ಉಪಯೋಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ದೇಶದಲ್ಲಿ ಲಕ್ಷಕ್ಕೂ ಅಧಿಕ ಕಾಲೇಜ್‌ಗಳಿವೆ. ಪ್ರತಿ ವರ್ಷ ಕೋಟಿಗೂ ಅಧಿಕ ಪದವೀಧರರು ಹೊರಬರುತ್ತಿದ್ದಾರೆ. ನೂರು ಜನರಲ್ಲಿ ಶೇ.22.6ರಷ್ಟು ಜನರಿಗೆ ಮಾತ್ರ ಉದ್ಯೋಗ ನೀಡಬಹುದಾಗಿದೆ. ಹಾಗಾಗಿ, ಯುವ ಸಮೂಹ ಜ್ಞಾನದ ಜತೆಗೆ ಕೌಶಲ ರೂಢಿಸಿಕೊಳ್ಳಬೇಕು. ಕೈಗಾರಿಕೆಗಳಿಗೆ ಬೇಕಾದ ಕೌಶಲ ಯುವ ಸಮೂಹ ಹೊಂದಬೇಕು ಎಂದದರು.
ಕೃಷಿ, ತೋಟಗಾರಿಕೆ, ಹಣ್ಣು, ತರಕಾರಿ, ಹಾಲು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಇಂತಹ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶುಭ ಕೋರಿದರು.
ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಸೋನಾಲಿ ಕ್ಷೀರಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಹಿರೇಮಠ, ತಾಲೂಕು ಅಧ್ಯಕ್ಷ ಎಂ.ಎಂ.ಮೈದೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಶಂಭನಗೌಡ ಪಾಟೀಲ, ಸುಭಾಸ ಮಜ್ಜಗಿ, ನಾಗಪ್ಪ ಗೋಡಿ, ಕುಮಾರ ಬಿದರಗಡ್ಡಿ, ಚೇತನಕುಮಾರ ಮೊಹತೆ, ಇತರರು ಉಪಸ್ಥಿತರಿದ್ದರು.