

ಹಾವೇರಿ: ಗುತ್ತಿಗೆದಾರರ ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷೃ, ಮತ್ತಿತರ ಕಾರಣಗಳಿಂದ ಅಗತ್ಯವಾದ ನೀರಿನ ಮೂಲಗಳಿದ್ದರೂ ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಹಾವೇರಿ ಜನ ಬಹಳ ಒಳ್ಳೆಯವರು. ಬೀದಿಗೆ ಇಳಿದು ಪ್ರತಿಭಟಿಸಲ್ಲ. ಇದರಿಂದ ನಮಗೇ ನಾಚಿಕೆ ಬರುವಂತಾಗಿದೆ ಎಂದು ವ್ಯವಸ್ಥೆ ವಿರುದ್ಧ ಸ್ವತಃ ಶಾಸಕ ರುದ್ರಪ್ಪ ಲಮಾಣಿ ಬೇಸರ ವ್ಯಕ್ತಪಡಿಸಿದರು. ಹಾಗಂತ ನಾನು ಸುಮ್ಮನೆ ಕೂರಲ್ಲ. ಸಮಸ್ಯೆ ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಭರವಸೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮುಂದುವರಿದ ಸಾಮಾನ್ಯ ಸಭೆಯಲ್ಲಿ 24/7 ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದೆ. ಎಲ್ಲಿಯೂ ಸರಿಯಾದ ಪೈಪ್‌ಲೈನ್ ಮಾಡಿಲ್ಲ. ನಗರಸಭೆ ಎಇಇ ಮೊಹಮ್ಮದ್ ಸಮೀರ್ ಹಾಗೂ ಕೆಯುಐಡಿಎಫ್‌ಸಿ ಇಂಜಿನಿಯರ್ ಪ್ರವೀಣ ಕೆ. ನಗರಸಭೆ ಸದಸ್ಯರ ಹಾದಿ ತಪ್ಪಿಸಬೇಡಿ. ಹಲವೆಡೆ 6 ಇಂಚು ಪೈಪ್ ಹಾಕುವ ಬದಲು 2 ಇಂಚು ಪೈಪ್ ಹಾಕಲಾಗಿದೆ. ಪ್ರಾಯೋಗಿಕ ಸಂಪರ್ಕದ ವೇಳೆ ನಮ್ಮನ್ನೂ ಕರೆದುಕೊಂಡು ಹೋಗಿ ಸಮಸ್ಯೆ ತೋರಿಸುತ್ತೇವೆ ಎಂದು ಸದಸ್ಯರು ಸವಾಲ್ ಹಾಕಿದರು. ತುಂಗಭದ್ರಾ, ವರದಾ ನದಿ ಹಾಗೂ ಹೆಗ್ಗೇರಿ ಕೆರೆಗಳಿದ್ದರೂ ನಗರದಲ್ಲಿ 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಕನಿಷ್ಠ 5 ದಿನಕ್ಕೊಮ್ಮೆಯಾದರೂ ನೀರು ಬಿಡುವ ವ್ಯವಸ್ಥೆ ಮಾಡಲೇಬೇಕು ಎಂದು ನಗರಸಭೆ ಸದಸ್ಯರಾದ ಸಂಜೀವ ನೀರಲಗಿ, ಐ.ಯು.ಪಠಾಣ ಶಿವಯೋಗಿ ಹುಲಿಕಂತಿಮಠ, ವೆಂಕಟೇಶ ಬಿಜಾಪುರ, ಇತರ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಲಮಾಣಿ, ನಗರಸಭೆ ಹಾಗೂ ಕೆಯುಐಡಿಎಫ್‌ಸಿ ಅಧಿಕಾರಿಗಳು ಸಮನ್ವಯದಿಂದ ಎಲ್ಲೆಲ್ಲಿ ಸಮಸ್ಯೆ ಇದೆ ಗುರುತಿಸಿ ಸರಿಪಡಿಸಬೇಕು. ಪೌರಾಯುಕ್ತ ಸುಭಾಸ ಕಂಬಳಿ ಮೇಲ್ವಿಚಾರಣೆ ಮಾಡಬೇಕು. ಒಂದೊಂದು ವಲಯದಲ್ಲಿ ಮೊದಲು 24/7 ನೀರು ಪೂರೈಕೆಗೆ ಅಗತ್ಯ ಕ್ರಮ ಜರುಗಿಸಬೇಕು. ಮುಂದಿನ ವಾರ ಬೆಂಗಳೂರಿನಲ್ಲಿ ಸಚಿವರು, ಮೇಲಧಿಕಾರಿಗಳೊಂದಿಗೆ ಸಭೆ ನಡೆಸುವೆ ಎಂದರು.
ಹೈಟೆಕ್ ರಂಗಮಂದಿರ ನಿರ್ವಹಣೆ ಟೆಂಡರ್ ಕರೆದರೂ ಯಾರೂ ಬರಲಿಲ್ಲ. ಹಾಗಾಗಿ, ವಿಜಯಪುರದ ಗುತ್ತಿಗೆದಾರರೊಬ್ಬರು ಮುಂದೆ ಬಂದಿದ್ದು, 72 ಲಕ್ಷ ರೂ. ಟೆಂಡರ್ ಪಡೆಯಲು ಒಪ್ಪಿದ್ದಾರೆ. ಆದೆ, ಒಂದೇ ಬಾರಿಗೆ ಹಣ ಪಾವತಿಸಲು ಆಗಲ್ಲ. ಹಂತ ಹಂತವಾಗಿ ಪಾವತಿಸಲು ಅನುಮತಿ ನೀಡುವಂತೆ ಸದಸ್ಯ ನೀರಲಗಿ ಕೋರಿದರು. ಅನುಮತಿ ನೀಡುವಂತೆ ಶಾಸಕರು ಸೂಚಿಸಿದರು.
ಎಲ್‌ಬಿಎಸ್ ಮಾರುಕಟ್ಟೆಯ 29 ಮಳಿಗೆ ಹರಾಜು ಹಾಕಬೇಕು. ವ್ಯಾಪಾರಿಗಳು ಪಾದಚಾರಿ ಮಾರ್ಗ ಬಳಸದಂತೆ ಕ್ರಮ ಕೈಗೊಂಡು ನಗರದ ಸೌಂದರ್ಯ ಹೆಚ್ಚಿಸಬೇಕು. ಪಕ್ಷಾತೀತವಾಗಿ ಒಂಚೂರು ಒಳ್ಳೆಯ ಕೆಲಸ ಮಾಡೋಣ. ಜನ ಅದಕ್ಕಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಂದು ಒಬ್ಬನ ಜವಾಬ್ದಾರಿ ಅಲ್ಲ. ಎಲ್ಲರೂ ಸೇರಿ ಸರಿಪಡಿಸೋಣ ಎಂದರು.
ಅಧಿಕಾರಿಗಳ ನಿರ್ಲಕ್ಷೃಕ್ಕೆ 22 ಕೋಟಿ ವಾಪಸ್
ಈ ಹಿಂದೆ ನೀರು ಪೂರೈಕೆ, ಮೀಟರ್ ಅಳವಡಿಕೆಗಾಗಿ 22 ಕೋಟಿ ರೂ. ಅನುದಾನ ಬಂದಿತ್ತು. ಅದನ್ನು ಸರಿಯಾಗಿ ಸದ್ಬಳಕೆ ಮಾಡದ ಹಿನ್ನೆಲೆ ಸರ್ಕಾರಕ್ಕೆ ವಾಪಸ್ ಹೋಯಿತು. ಈಗಲಾದರೂ ಎಲ್ಲ ಮನೆಗಳಿಗೆ ಮೀಟರ್ ಅಳವಡಿಸಲು ಯೋಜನೆ ರೂಪಿಸಿ. ಮೀಟರ್ ಹಣ ನಗರಸಭೆ ಕೊಡುತ್ತದೆ. ನಂತರ ಜನರಿಗೆ ನೀರು ಕೊಟ್ಟು ಬಿಲ್ ವಸೂಲಿ ಮಾಡಿ ಎಂದು ಕೆಯುಐಡಿಎಫ್‌ಸಿ ಅಧಿಕಾರಿಗೆ ಸದಸ್ಯ ಸಂಜೀವ ನೀರಲಗಿ ಹೇಳಿದರು.
ಸಾರ್ವಜನಿಕ ಶೌಚಗೃಹ ನಿರ್ಮಿಸಿ
ಜಿಲ್ಲಾ ಕೇಂದ್ರದಲ್ಲಿ ಶೌಚಕ್ಕೆ ಹೋಗಲು ತೀರಾ ಸಮಸ್ಯೆ ಇದೆ. ಕೆಲವರು ನಮ್ಮ ಅಂಗಡಿ ಮುಂದೆ ಬೇಡ ಎನ್ನುತ್ತಾರೆ. ಎಪಿಎಂಸಿಯಲ್ಲಿ ನಿರ್ಮಿಸದೇ ನಗರದ ಜನನಿಬಿಡ ಪ್ರದೇಶಲ್ಲಿ ಗಟ್ಟಿ ನಿರ್ಧಾರ ಕೈಗೊಂಡು ಶೌಚಗೃಹ ಸ್ಥಾಪಿಸಬೇಕು. ಸುಭಾಸ ವೃತ್ತದಲ್ಲಿ, ಕೆಇಬಿ ಕಚೇರಿ ಬಳಿ ಅಗತ್ಯವಿದೆ. ಪೊಲೀಸ್ ಭದ್ರತೆಯಲ್ಲಿ ಆದರೂ ಶೌಚಗೃಹ ನಿರ್ಮಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಖರ್ಚು ವೆಚ್ಚದ ಸಮಗ್ರ ಮಾಹಿತಿ ಇಲ್ಲ
201 ವೈಯಕ್ತಿಕ ಶೌಚಗೃಹ ನಿರ್ಮಾಣ ಕುರಿತು ಸಭೆಯ ಗಮನಕ್ಕೂ ತಂದಿಲ್ಲ. ನಗರಸಭೆಯ ವಾರ್ಷಿಕ ಖರ್ಚುವೆಚ್ಚದ ಕುರಿತು ಸಭೆಗೆ ಸೂಕ್ತ ಮಾಹಿತಿ ನೀಡುವುದಿಲ್ಲ. ಇದಕ್ಕೆ ನನ್ನ ವಿರೋಧವಿದೆ. ಹೀಗಾದರೆ, ಅಧ್ಯಕ್ಷರು, ಸದಸ್ಯರು ಯಾಕೆ ಬೇಕು. ಸದಸ್ಯರಿಗೆ ಸಮರ್ಪಕ ಮಾಹಿತಿ ನೀಡಿದ ನಂತರವೇ ಅನುಮೋದಿಸಿ ಎಂದು ಸದಸ್ಯ ಐ.ಯು.ಪಠಾಣ ಪಟ್ಟುಹಿಡಿದರು. ನಗರಸಭೆ ಖರ್ಚುವೆಚ್ಚ ತಡೆಹಿಡಿದರೆ ಕೆಲಸಗಳು ವಿಳಂಬ ಆಗುತ್ತವೆ. ಹಾಗಾಗಿ, ಇದೊಂದು ಸಲ ಅನುಮೋದಿಸಿ. ಮುಂದಿನ ಬಾರಿ ಸಮಗ್ರ ಮಾಹಿತಿ ನೀಡುತ್ತೇವೆ ಎಂದು ಪೌರಾಯುಕ್ತ ಸುಭಾಸ ಕಂಬಳಿ ಮನವಿ ಮಾಡಿದರು. ಶಾಸಕರೂ ಇದಕ್ಕೆ ತಲೆಯಾಡಿಸಿದ ಬಳಿಕ ಅನುಮೋದಿಸಲಾಯಿತು.
ಟ್ಯಾಗ್ ತೆಗೆದು ರಾಜಕಾರಣ ಮಾಡಿ
ನಗರದ 2, 6, 9, 11, 13, 31ನೇ ವಾರ್ಡ್‌ಗಳಲ್ಲಿ ನಗರೋತ್ಥಾನ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಹಿ ಮಾಡಿ ಕೊಟ್ಟಿದ್ದೀರಿ. ನಮ್ಮ ವಾರ್ಡ್‌ಗಳಲ್ಲಿ ಕಳಪೆ, ಅರ್ಧ ಕಾಮಗಾರಿ ಆಗಿದೆ. ಆಗಲೇ ಬಿಲ್ ಪಾಸು ಹೇಗೆ ಮಾಡಿದ್ದೀರಿ ಎಂದು ಸದಸ್ಯರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಯಾರ ಗಮನಕ್ಕೆ ತಂದು ಸಹಿ ಮಾಡಿದ್ದೀರಿ ? ಕೌನ್ಸಿಲ್ ಬಾಡಿ ಇದೆಯಾ ಸತ್ತಿದೆಯಾ ? ಅಧ್ಯಕ್ಷರ ಗಮನಕ್ಕೆ ತಂದಿದ್ದೀರಾ ? ಎಂದು ಪ್ರಭಾರ ಪೌರಾಯುಕ್ತ ಸುಭಾಸ ಕಂಬಳಿ ಅವರನ್ನು ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಖಾರವಾಗಿ ಪ್ರಶ್ನಿಸಿದರು. ಹಿಂಗ ಮಾಡೋದಾದ್ರ ನಾವ್ಯಾಕ ಇರಬೇಕಿಲ್ಲಿ. ನೀವು ಅಧಿಕಾರಿಯಾ, ರಾಜಕಾರಣಿಯಾ ? ಟ್ಯಾಗ್ ತೆಗೆದಿಟ್ಟು ರಾಜಕೀಯಕ್ಕೆ ಸೇರಿ ಎಂದು ತರಾಟೆಗೆ ತೆಗೆದುಕೊಂಡರು.