

ಹಾವೇರಿ: ಕಳೆದ ವರ್ಷ ಬರಗಾಲದಿಂದ ಬೆಳೆ ಹಾನಿಗೀಡಾದ ಪರಿಹಾರ, ಬೆಳೆ ವಿಮೆ ಹಣ ಸರಿಯಾಗಿ ಬಂದಿಲ್ಲ. ಈ ವರ್ಷ ಮತ್ತೆ ಪ್ರವಾಹಕ್ಕೆ ಬೆಳೆ ಹಾಳಾಗಿದ್ದು, ಕೂಡಲೇ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಿ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ಎದುರು ರೈತರು ಮನವಿ ಮಾಡಿಕೊಂಡರು.
ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಬಳಿ ವರದಾ ನದಿಯಿಂದ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶ ವೀಕ್ಷಣೆಗೆ ತೆರಳಿದ್ದ ವೇಳೆ ಬುಧವಾರ ಸ್ಥಳೀಯ ರೈತರು ಸಚಿವರಿಗೆ ಅಹವಾಲು ಹೇಳಿಕೊಂಡರು. ಬ್ರಿಟೀಷರ ಕಾಲದಲ್ಲಿ ಕಟ್ಟಿದ ಸೇತುವೆ ದುರಸ್ತಿ ಮಾಡಿ, ದೊಡ್ಡ ವಾಹನ ಓಡಾಡದಂತೆ ಕ್ರಮ ಜರುಗಿಸಿ. ಬಸ್ ನಿಲ್ದಾಣದಿಂದ ಸೇತುವೆವರೆಗೆ ವಿದ್ಯುತ್ ದೀಪ ಅಳವಡಿಸಿ. ಸೇತುವೆ ಬಳಿ ಏತ ನೀರಾವರಿ ಯೋಜನೆ ಯಂತ್ರಗಳು ಹಾಳಾಗಿದ್ದು, ದುರಸ್ತಿಪಡಿಸಿ ಸಮಸ್ಯೆ ಬಗೆಹರಿಸಿ ಎಂದು ಹೇಳಿದರು.
ಈ ವೇಳೆ ಸೇತುವೆ, ಏತ ನೀರಾವರಿಗೆ ಬಿಡುಗಡೆಯಾದ ಹಣವನ್ನು ಕೆಲವರು ಹಂಚಿಕೊಂಡಿದ್ದು, ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಸೇತುವೆ ಸಮಸ್ಯೆ ಯಾಕೆ ಸರಿಪಡಿಸಿಲ್ಲ ಎಂದು ಸಚಿವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಕೂಡಲೇ ದುರಸ್ತಿ ಮಾಡಿ ಎಂದರು ಸೂಚಿಸಿದರು. ಬೆಳೆಹಾನಿಗೆ ಶೀಘ್ರದಲ್ಲೇ ಪರಿಹಾರ ಕೊಡುವುದಾಗಿ ಹೇಳಿದರು.
ನಂತರ ನಾಗನೂರ- ಕೂಡಲ ಸಂಪರ್ಕಿಸುವ ಬಾಂದಾರ ಕಮ್ ಸೇತುವೆ ಮುಳುಗಡೆಯಾಗಿದ್ದನ್ನು ವೀಕ್ಷಿಸಿದರು. ಪಕ್ಕದಲ್ಲೇ ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿ ಕುರಿತು ಪರಿಶೀಲಿಸಿದರು. ಭೂಸ್ವಾಧೀನ ಪೂರ್ಣಗೊಳಿಸಿ, ಕಾಮಗಾರಿ ಪುನಾರಂಭಿಸಲು ಸೂಚಿಸಿದರು.
ಬಳಿಕ ಬಾಳಂಬೀಡ ಗ್ರಾಮದ ಬಳಿ ವರದಾ ನದಿ ಹಾಗೂ ಕೆರೆಯ ನೀರು ಸುಮಾರು 150 ಎಕರೆ ಜಮೀನುಗಳಿಗೆ ನುಗ್ಗಿರುವುದನ್ನು ಪರಿಶೀಲಿಸಿದರು. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಪ್ಪರ್ ತುಂಗಾ ಮೇಲ್ದಂಡೆ (ಯುಟಿಪಿ) ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಚಿವರೊಂದಿಗೆ ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಆನಂದಸ್ವಾಮಿ ಗಡ್ಡದೇವರಮಠ ಸಾಥ್ ನೀಡಿದರು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಎಎಸ್‌ಪಿ ಸಿ.ಗೋಪಾಲ, ಎಸಿಗಳಾದ ಮಹ್ಮದ್ ಖಿಜರ್, ಚನ್ನಪ್ಪ ಎಚ್.ಬಿ., ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಡಿಡಿ ಪ್ರದೀಪ ಎಲ್., ತಹಸೀಲ್ದಾರ್‌ಗಳಾದ ಶಂಕರ ಜಿ.ಎಸ್. ಮಂಜುಳಾ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಅಕ್ಕಿಆಲೂರ ಕೆರೆಗೆ ಬಾಗೀನ
ಅಕ್ಕಿಆಲೂರಿನ ದೊಡ್ಡ ಕೆರೆ ತುಂಬಿ ಕೋಡಿ ಬಿದ್ದ ಕಾರಣ ಸಚಿವ ಶಿವಾನಂದ ಪಾಟೀಲರು ಕೆರೆಗೆ ಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಿ ನಮಸ್ಕರಿಸಿದರು.