ವರ್ತಕರು ಬಯಸಿದರೆ ಹತ್ತಿ ಟ್ರೇಡಿಂಗ್ ಸ್ಥಳಾಂತರ; ಗುತ್ತಲ, ಹಾನಗಲ್ಲ ರಸ್ತೆಯ ಎಪಿಎಂಸಿಗಳಿಗೆ ಕೃಷಿ ಮಾರುಕಟ್ಟೆ ಸಚಿವರ ಭೇಟಿ, ಪರಿಶೀಲನೆ

28 HVR 5
Published on

ಹಾವೇರಿ: ವರ್ತಕರು ಬಯಸಿದರೆ ಹತ್ತಿ ಟ್ರೇಡಿಂಗ್ ಚಟುವಟಿಕೆಗಳನ್ನು ಹಾನಗಲ್ಲ ರಸ್ತೆಯ ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಭರವಸೆ ನೀಡಿದರು.

ಗುತ್ತಲ ರಸ್ತೆ ಮತ್ತು ಹಾನಗಲ್ಲ ರಸ್ತೆಗಳಲ್ಲಿರುವ ಎರಡೂ ಎಪಿಎಂಸಿ ಯಾರ್ಡ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ವರ್ತಕರ ಅಹವಾಲುಗಳನ್ನು ಆಲಿಸಿದರು.

ಸಕ್ರಿಯವಾಗಿ ಇರುವ ಟ್ರೇಡರ್ಸ್‌ಗೆ ಮೊದಲ ಆದ್ಯತೆ. ಲೈಸೆನ್ಸ್ ಪಡೆದಿದ್ದರೂ ಟ್ರೇಡ್ ಚಟುವಟಿಕೆ ಮಾಡದ ವರ್ತಕರನ್ನು ಪರಿಗಣಿಸುವುದು ಕಷ್ಟ ಎಂದ ಸಚಿವರು, ಹತ್ತಿ ಟ್ರೇಡಿಂಗ್ ಸ್ಥಳಾಂತರದ ಬಗ್ಗೆ ಕಾರ್ಯಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು

ಮಾರುಕಟ್ಟೆಯಲ್ಲಿ ರಸ್ತೆ ಹಾಳಾಗಿದೆ, ಚರಂಡಿ ವ್ಯವಸ್ಥೆ ಇಲ್ಲ, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸಿಕೊಡಬೇಕು ಎಂದು ಹಾನಗಲ್ಲ ರಸ್ತೆ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಪುಂಡಲೀಕ ಶಿರೂರು ಸಚಿವರಿಗೆ ಮನವಿ ಮಾಡಿದರು.

ಹತ್ತಿ ಮಾರುಕಟ್ಟೆಯಲ್ಲಿ ವಾಣಿಜ್ಯ ಚಟುವಟಿಕೆ ಕುಸಿದಿದೆ. ಈ ಮೊದಲು ಇದ್ದ ಪ್ರಮಾಣದಲ್ಲಿ ಟ್ರೇಡಿಂಗ್ ಆಗುತ್ತಿಲ್ಲ. ಮಾರುಕಟ್ಟೆ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಟ್ರೇಡರ್ಸ್ ಮನವಿ ಮಾಡಿದರು.

ಗುತ್ತಲ ಎಪಿಎಂಸಿ ಬಗ್ಗೆ ಮಾಹಿತಿ ನೀಡಿದ ಕಾರ್ಯದರ್ಶಿ ಜಿ.ಕೆ. ಕಬ್ಬೇರಹಳ್ಳಿ, ಒಟ್ಟು 96 ಪ್ಲಾಟ್‌ಗಳಿದ್ದು, 84 ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಹತ್ತು ಪ್ಲಾಟಲ್‌ಗಳಲ್ಲಿ ಅಂಗಡಿ ಮತ್ತು ಗೋದಾಮು ನಿರ್ಮಿಸಲಾಗಿದೆ. ಎರಡು ಖಾಲಿ ಇವೆ ಎಂದು ಹೇಳಿದರು.

ಆಡಳಿತಾಧಿಕಾರಿ ಶೈಲಜಾ ಅವರು ಬಹುತೇಕ ರೈತರು ನೇರವಾಗಿ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ತರುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದರು

ಗುತ್ತಲ ರಸ್ತೆಯ ಹತ್ತಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಹಾನಗಲ್ಲ ರಸ್ತೆಯ ಎಪಿಎಂಸಿಗೆ ಸ್ಥಳಾಂತರ ಮಾಡಿ, ಗುತ್ತಲ ರಸ್ತೆ ಮಾರುಕಟ್ಟೆ ಪ್ರದೇಶವನ್ನು ಕೈಗಾರಿಕೆಗಳಿಗೆ ಹಂಚಿಕೆ ಮಾಡಬಹುದು ಎಂದು ಕೆಲವರು ಸಲಹೆ ನೀಡಿದರು.

ಹಾನಗಲ್ಲ ಮಾರುಕಟ್ಟೆಯಲ್ಲಿರುವ ಆಹಾರ ಧಾನ್ಯ ದಾಸ್ತಾನು ಮಾಡಲು ನಿರ್ಮಿಸಿರುವ ಸೈಲೋ (ಗೋದಾಮು) ಘಟಕ ಬಳಕೆಯಾಗುತ್ತಿಲ್ಲ ಎಂದು ನಗರಸಭೆ ಸದಸ್ಯ ಸಂಜೀವ ನೀರಲಗಿ ಹೇಳಿದರು. ಮಾರುಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ಏನೇನು ಮಾಡಬಹುದು ಎಂಬ ಬಗ್ಗೆ ಯೋಜನೆ ರೂಪಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಉಪಸಭಾಪತಿ ರುದ್ರಪ್ಪ ಲಮಾಣಿ, ವರ್ತಕರ ಸಂಘದ ಅಧ್ಯಕ್ಷ ಪುಂಡಲೀಕ ಶಿರೂರು, ರಾಜಶೇಖರ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಕೃಷಿ ಮಾರುಕಟ್ಟೆ ಇಲಾಖೆ ಅಪರ ನಿರ್ದೇಶಕ ನಜೀಬುಲ್ಲಾಖಾನ್ (ಆಡಳಿತ), ಕೆ.ಎಂ. ನಾಗೇಶ (ಆಡಳಿತ), ಅಧೀಕ್ಷಕ ಅಭಿಯಂತರ ರಘುನಂದನ, ವಿಭಾಗೀಯ ಅಧಿಕಾರಿ ಕೆ.ಕೋರಿಗೌಡ, ಆಡಳಿತಾಧಿಕಾರಿ ಶೈಲಜಾ, ಎಪಿಎಂಸಿ ಕಾರ್ಯದರ್ಶಿ ಜಿ.ಕೆ.ಕಬ್ಬೇರಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net