ಎಸಿ, ತಹಸೀಲ್ದಾರ್‌ಗೆ ಸಚಿವರ ಎಚ್ಚರಿಕೆ !; ತಿಂಗಳೊಳಗೆ ಕಚೇರಿಯ ಸಮಸ್ಯೆ ಬಗೆಹರಿಸಿ; ಮಿನಿಸ್ಟರ್ ಶಿವಾನಂದ ಪಾಟೀಲ್ ಖಡಕ್ ಸೂಚನೆ

19 HVR 3 A
Published on

ಹಾವೇರಿ: ನಗರದ ರೈಲು ನಿಲ್ದಾಣದ ಎದುರು ಇರುವ ಹಾವೇರಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೋಮವಾರ ಅನಿರೀಕ್ಷಿತವಾಗಿ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ದಂಗಾದರು. ಮಧ್ಯವರ್ತಿಗಳನ್ನು ಹೊರ ಹಾಕಿ, ಒಂದು ತಿಂಗಳ ಒಳಗಾಗಿ ಎಲ್ಲ ಸಮಸ್ಯೆ ಸರಿಪಡಿಸುವಂತೆ, ಇಲ್ಲದಿದ್ದರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಖಡಕ್ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಕಚೇರಿ, ಭೂಮಾಪನಾ ಇಲಾಖೆ ಹಾಗೂ ಉಪ ನೋಂದಣಾಧಿದಕಾರಿ ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ಅಲ್ಲಿದ್ದ ಸಾರ್ವಜನಿಕರಿಂದ ದೂರುಗಳ ಸರಮಾಲೆಯೇ ಹರಿದುಬಂದವು. ಕಚೇರಿಗೆ ಬಂದಿದ್ದ ಸಾರ್ವಜನಿಕರ ಅಹವಾಲು ಕೇಳಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ವಿವರಣೆ ಕೇಳಿದರು.
ಯಾವ ಯಾವ ಸಿಬ್ಬಂದಿ ಎಷ್ಟು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ? ಸಾರ್ವಜನಿಕರಿಂದ ಯಾವ ಕಾರಣಕ್ಕೆ ದೂರುಗಳು ಬರುತ್ತಿವೆ ? ನಿಮ್ಮ ಕೆಲಸ ಏನು ? ದಾಖಲೆಗಳನ್ನು ಏಕೆ ನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆಸಬೇಡಿ, ತಕ್ಷಣ ಅವರ ಕೆಲಸ ಮಾಡಿಕೊಡಿ ಎಂದು ಸೂಚಿಸಿದರು.
ಭೂಮಾಪನಾ ಇಲಾಖೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದಾಗ ರೈತ ಸಂಘದ ಮುಖಂಡರು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಸಚಿವರಿಗೆ ದೂರಿದರು. ರೈತ ಸಂಘದ ಮುಖಂಡರು ಕೊಟ್ಟ ಅರ್ಜಿ ಇನ್‌ವಾರ್ಡ್ ಆಗಿರುವ ಬಗ್ಗೆ ಮಾಹಿತಿ ಕೇಳಿದರು. ಆದರೆ, ದಾಖಲಾಗಿರಲಿಲ್ಲ. ಹೀಗಾಗಿ, ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಐಎಂಪಿ ಪ್ರಕರಣಗಳು ಎಷ್ಟು ಮಾಡುತ್ತೀರಿ? ಎಂದು ಸಚಿವರು ಭೂಮಾಪನಾ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ನೂರು ಅರ್ಜಿ ಬರುತ್ತವೆ. ಎಂಭತ್ತು ವಿಲೇವಾರಿ ಮಾಡುತ್ತೇವೆ ಎಂದು ಸಮಜಾಯಿಷಿ ನೀಡಿದರು. ಆದರೆ, ವಿಲೇವಾರಿ ಮಾಡಿದ ಬಗ್ಗೆ ದಾಖಲೆ ಕೊಡಲಿಲ್ಲ. ಅವ್ಯವಸ್ಥೆಯ ಬಗ್ಗೆ ವರದಿ ಕೊಡಿ ಎಂದು ಉಪವಿಭಾಗಾಧಿಕಾರಿಗೆ ನಿರ್ದೇಶಿಸಿದರು.
ಆಧಾರ್ ಕಾರ್ಡ್ ತಿದ್ದುಪಡಿ ಸರಿಯಾಗಿ ಆಗುತ್ತಿಲ್ಲ. ತಿದ್ದುಪಡಿ ಮಾಡಿಸಿದರೂ ಮತ್ತೆ ಅದೇ ಲೋಪಗಳು ಬರುತ್ತಿವೆ. ಪಡಿತರ ಚೀಟಿಗಳು ಐದು ವರ್ಷಗಳಿಂದ ಪೆಂಡಿಂಗ್ ಇವೆ. ಬೆಳೆವಿಮೆ ಬಿಡುಗಡೆಯಾಗಿಲ್ಲ. ಸಾಮಾಜಿಕ ಯೋಜನೆಯ ಪಿಂಚಣಿ ಸಕಾಲಕ್ಕೆ ಬರುತ್ತಿಲ್ಲ ಎಂಬ ದೂರುಗಳು ಜನರಿಂದ ಬಂದವು.
ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವರು, ಇನ್ನು ಮುಂದೆ ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ದೂರುಗಳು ಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್ ಜಿ.ಶಂಕರ, ಎಡಿಎಲ್ಆರ್ ನಾಗರಾಜ ಚಕ್ರಸಾಲಿ, ಉಪನೋಂದಣಾಧಿಕಾರಿ ವಿದ್ಯಾಸಾಗರ ದೇವರುಷಿ, ಮತ್ತಿತರರು ಇದ್ದರು.
ಮದ್ಯವರ್ತಿಗೆ ಗೇಟ್ ಪಾಸ್
ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಗೆ ಸಚಿವರು ಭೇಟಿ ನೀಡಿದಾಗ ಕಚೇರಿಯಲ್ಲೇ ಮಧ್ಯವರ್ತಿಯೊಬ್ಬ ಸಿಕ್ಕಿಬಿದ್ದ. ಆತ ಯಾರು ಎಂದು ಸಚಿವರು ಪ್ರಶ್ನಿಸಿದಾಗ, ಅಧಿಕಾರಿಗಳು ತಡವರಿಸಿದರು. ಕಚೇರಿ ಸ್ಚಚ್ಛಗೊಳಿಸುವ ಸಿಬ್ಬಂದಿ, ಟೀ ತರಲು ಇದ್ದಾರೆ ಎಂದು ಸಮರ್ಥಿಸಿಕೊಳ್ಳಲು ಅಧಿಕಾರಿಗಳು ಯತ್ನಿಸಿದರು. ಸಚಿವರು ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಎಲ್ಲರೂ ಗುರುತಿನ ಚೀಟಿ ಧರಿಸಿದ್ದರು. ಆದರೆ, ಮಧ್ಯವರ್ತಿಗೆ ಐಡಿ ಇರಲಿಲ್ಲ. ತಕ್ಷಣ ಸಚಿವರು ಆತನನ್ನು ಕಚೇರಿಯಿಂದ ಹೊರಗೆ ಕಳುಹಿಸಿದರು. ಮದ್ಯವರ್ತಿಗಳ ಹಾವಳಿ ಬಗ್ಗೆ ಹಲವು ದೂರು ಬಂದಿದ್ದು, ಯಾವುದೇ ಕಾರಣಕ್ಕೂ ಕಚೇರಿ ಒಳಗೆ ಬಿಟ್ಟುಕೊಳ್ಳಬಾರದು. ಇನ್ನು ಮುಂದೆ ಇಂತಹ ದೂರುಗಳು ಬರಬಾದರು ಎಂದು ತಾಕೀತು ಮಾಡಿದರು.
ಎಸಿ ಚನ್ನಪ್ಪ ಅವರಿಗೂ ತರಾಟೆ
ಬೆಳೆ ವಿವರಣೆಯನ್ನು ಪಹಣಿ ಪತ್ರದಲ್ಲಿ ಸರಿಪಡಿಸಲು ರಾಣೆಬೆನ್ನೂರ ತಹಸೀಲ್ದಾರ್‌ಗೆ ಅರ್ಜಿ ಕೊಟ್ಟರೆ ಅಲ್ಲಿ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಉಪವಿಭಾಗಾಧಿಕಾರಿ ಕಚೇರಿಗೆ ಬಂದಿದ್ದೇನೆ ಎಂದು ರೈತರೊಬ್ಬರು ಸಚಿವರ ಗಮನಕ್ಕೆ ತಂದರು. ತಕ್ಷಣ ಸಂಬಂಧಪಟ್ಟ ಸಿಬ್ಬಂದಿ ಕರೆದು ವಿಚಾರಣೆ ಮಾಡಿದರು. ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಅವರನ್ನು ಕರೆದು, ರಾಣೆಬೆನ್ನೂರ ತಹಸೀಲ್ದಾರ್ ಕಚೇರಿ ನಿಮ್ಮ ಅಧೀನದಲ್ಲಿಯೇ ಬರಲಿದೆ. ಈ ಬಗ್ಗೆ ಏಕೆ ಗಮನ ಹರಿಸಲಿಲ್ಲ ಎಂದು ತರಾಟೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net