

ಹಾವೇರಿ: ಶಿಗ್ಗಾಂವಿ, ಸವಣೂರ ಹಾಗೂ ಬಂಕಾಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಒಟ್ಟು 351.23 ಕೋಟಿ ರೂ. ಅಂದಾಜು ಮೊತ್ತದ ಕೆರೆಗಳ ಅಭಿವೃದ್ಧಿ ಮೂರು ಯೋಜನೆಗಳಿಗೆ ಸಚಿವ ಸಂಪುಟ ಗುರುವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸವಣೂರ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು 153.20 ಕೋಟಿ ರೂ. ವೆಚ್ಚದಲ್ಲಿ ಮೋತಿತಲಾಬ ಕೆರೆ ಸುಧಾರಣಾ ಕಾಮಗಾರಿ, ಶಿಗ್ಗಾಂವಿ ಪಟ್ಟಣಕ್ಕೆ ನೀರು ಪೂರೈಸಲು 105.19 ಕೋಟಿ ರೂ. ವೆಚ್ಚದಲ್ಲಿ ನಾಗನೂರು ಕೆರೆ ಅಭಿವೃದ್ಧಿ ಹಾಗೂ ಬಂಕಾಪುರ ಪಟ್ಟಣಕ್ಕೆ ನೀರು ಪೂರೈಸಲು 92.84 ಕೋಟಿ ರೂ. ವೆಚ್ಚದಲ್ಲಿ ತವರಮಳ್ಳಿಹಳ್ಳಿ ಕೆರೆ ಸುಧಾರಣಾ ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ವರದಾ ನದಿ ಬತ್ತಿ ಬೇಸಿಗೆಯಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆಗೆ ಈ ಯೋಜನೆಗಳ ಅನಷ್ಠಾನದಿಂದ ಶಾಶ್ವತ ಪರಿಹಾರ ಸಿಗಲಿದೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೃಷ್ಟಿಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸವಣೂರ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ 71.15 ಕೋಟಿ ರೂ. ವೆಚ್ಚದ ಪರಿಷ್ಕೃತ ಅಂದಾಜಿಗೆ 2014ರ ಜೂನ್ 10ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಬೇಸಿಗೆ ದಿನಗಳಲ್ಲಿ ವರದಾ ನದಿ ಬತ್ತಿ ಹೋಗುವುದರಿಂದ ಈ ಅವಧಿಯ ಐದು ತಿಂಗಳು ಉದ್ಭವಿಸುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೋತಿತಲಾಬ ಕೆರೆಯಲ್ಲಿ ವರದಾ ನದಿಯಿಂದ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ನೀರಾವರಿ ಇಲಾಖೆಯಿಂದ ಜಾಗ ಹಸ್ತಾಂತರವಾಗದ ಕಾರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಅಮೃತ 2.0 ಯೋಜನೆಯಲ್ಲಿ ಸವಣೂರ ಪಟ್ಟಣದಲ್ಲಿ 47.43 ಕೋಟಿ ರೂ. ವೆಚ್ಚದಲ್ಲಿ ವಿತರಣಾ ಜಾಲ ಮತ್ತು ಗೃಹ ಸಂಪರ್ಕ ಜೋಡಣೆ, ಮೇಲ್ಮಟ್ಟದ ಜಲಸಂಗ್ರಹಾಗಾರಗಳು, ಶುದ್ಧೀಕರಣ ಘಟಕದ ನವೀಕರಣ, ಮೋತಿ ತಲಾಬ್ ಕೆರೆಯಲ್ಲಿ ಜಾಕ್‌ವೆಲ್ ಮತ್ತು ಪಂಪಿಂಗ್ ಮಷನರಿ ಕಾಮಗಾರಿ ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿದೆ. ಪ್ರಸ್ತುತ 2025-26ನೇ ಏಕರೂಪದ ದರಪಟ್ಟಿಯಂತೆ ತಲಾಬ ಕೆರೆ ಅಭಿವೃದ್ಧಿಗೆ 159.50 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಯುಐಡಿಎಸ್‌ಎಸ್ ಎಂಟಿ ಅನುದಾನದಲ್ಲಿ ಶಿಗ್ಗಾಂವಿ ಪಟ್ಟಣಕ್ಕೆ ವರದಾ ನದಿಯಿಂದ ನೀರು ಪೂರೈಸಲು ಈ ಹಿಂದೆ 39.75 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು. ಪ್ರಸ್ತುತ ಯುಐಡಿಎಸ್‌ಎಸ್ ಎಂಟಿ ಯೋಜನೆಯಲ್ಲಿ ಅನುದಾನ ಲಭ್ಯ ಇರುವುದಿಲ್ಲ. ಅಮೃತ 2.0 ಯೋಜನೆಯಲ್ಲಿ ಶಿಗ್ಗಾಂವಿಗೆ ನೀರು ಪೂರೈಕೆ ವಿತರಣಾ ಜಾಲ ಅಳವಡಿಸಲು 65.31 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಾಗಿದೆ. 2025-26ನೇ ಸಾಲಿನ ಏಕರೂಪ ದರಪಟ್ಟಿಯಂತೆ ಶಿಗ್ಗಾಂವಿಗೆ ನೀರು ಪೂರೈಸಲು ನಾಗನೂರು ಕೆರೆ ಅಭಿವೃದ್ಧಿಗೆ 109.50 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದೆ.
44.53 ಕೋಟಿ ರೂ. ವೆಚ್ಚದಲ್ಲಿ ಬಂಕಾಪುರ ಪಟ್ಟಣದಲ್ಲಿ ವಿತರಣಾ ಜಾಲ ಮತ್ತು ಗೃಹಸಂಪರ್ಕ ಜೋಡಣೆ, ಮೇಲ್ಮಟ್ಟದ ಜಲಸಂಗ್ರಹಾಗಾರ, ಶುದ್ಧೀಕರಣ ಘಟಕದ ನವೀಕರಣ, ತವರಮೆಳ್ಳಿಹಳ್ಳಿ ಕೆರೆಯಲ್ಲಿ ಹೌಸಿಂಗ್ ಚೇಂಬರ್ ಹಾಗೂ ಪಂಪಿಂಗ್ ಮಷಿನರಿ ಅಳವಡಿಸುವ ಕಾಮಗಾರಿ ಕೈಗೊಂಡಿದ್ದು, ಪ್ರಗತಿಯಲ್ಲಿವೆ. ಈಗ ತವರಮೆಳ್ಳಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ 96.75 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೋಟ್:
ಮೋತಿ ತಲಾಬ್ ಕೆರೆ, ನಾಗನೂರು ಕೆರೆ ಹಾಗೂ ತೆವರಮಳ್ಳಿಹಳ್ಳಿ ಕೆರೆಗಳನ್ನು ಅಭಿವೃದ್ಧಿಪಡಿಸಿ ವರದಾ ನದಿಯಿಂದ ನೀರು ಸಂಗ್ರಹ ಮಾಡುವ ಯೋಜನೆಗಳು ಅನುಷ್ಠಾನಕ್ಕೆ ಬಂದರೆ ಸವಣೂರ, ಶಿಗ್ಗಾಂವಿ ಹಾಗೂ ಬಂಕಾಪುರ ಪಟ್ಟಣಗಳಲ್ಲಿ ಬೇಸಿಗೆ ದಿನಗಳಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಶಾಸಕ ಯಾಸಿರ್ ಖಾನ್ ಪಠಾಣ್ ಅವರ ಕನಸು ನನಸಾಗಲಿದೆ.
- ಶಿವಾನಂದ ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ