ತಹಸೀಲ್ದಾರ್, ಎಸಿ ಕಚೇರಿ ಏಜೆಂಟರ ಹಾವಳಿಗೆ ಬ್ರೇಕ್; ಜಿಲ್ಲಾಸ್ಪತ್ರೆಗೆ ಶೀಘ್ರದಲ್ಲೇ ಎಂಆರ್‌ಐ ಮಷಿನ್; ಸಚಿವ ಶಿವಾನಂದ ಪಾಟೀಲ ಭರವಸೆ

Shivanand Patil 2
Published on

ಹಾವೇರಿ: ಜಿಲ್ಲೆಯ ಎಸಿ, ತಹಸೀಲ್ದಾರ್ ಕಚೇರಿಗಳಲ್ಲಿ ರಿಯಲ್ ಎಸ್ಟೇಟ್, ಮತ್ತಿತರ ಏಜೆಂಟರ ಹಾವಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೂತನ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್, ಎಸಿ ಕಚೇರಿಗಳಲ್ಲಿ ರಿಯಲ್ ಎಸ್ಟೇಟ್ ಸೇರಿದಂತೆ ಇತರ ಏಜೆಂಟರ ಹಾವಳಿ ವಿಪರೀತವಾಗಿದೆ. ಭೂ ಸರ್ವೆಗೆ 10, 20 ಸಾವಿರ ಕೇಳುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಸಿ, ತಹಸೀಲ್ದಾರ್ ಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ತಡೆಗಟ್ಟಲು ಡಿಸಿ ಅವರಿಗೆ ಆದೇಶಿಸಿದ್ದೇನೆ. ಒಂದು ತಿಂಗಳು ಕಾಲಾವಕಾಶ ಕೊಡಿ ಎಂದರು.
ಬಡ್ಡಿ ದಂಧೆಗೆ ತಡಸ ಗ್ರಾಮದಲ್ಲಿ ಕಾರ್ಮಿಕ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಬಡ್ಡಿ ದಂಧೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವ ಕೆಲಸ ವೇಗ ಪಡೆದುಕೊಂಡಿದೆ. ಜಿಲ್ಲಾಸ್ಪತ್ರೆಗೆ ಶೀಘ್ರದಲ್ಲೇ ಎಂಆರ್‌ಐ ಯಂತ್ರ ಬರಲಿದೆ. ಆಸ್ಪತ್ರೆಯಲ್ಲಿ ಪಾರ್ಕಿಂಗ್ ಸೇರಿ ಇತರ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ. ಮೆಡಿಕಲ್ ಕಾಲೇಜ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಎಂಬಿಬಿಎಸ್ ತರಗತಿಗಳು ಅಲ್ಲೇ ನಡೆಯುತ್ತಿವೆ. ಕಟ್ಟಡದ ಹಗರಣದ ಕುರಿತ ಎಸ್‌ಐಟಿ ತನಿಖೆ ನಡೆದಿದ್ದು, ಆ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಗೊತ್ತಿದೆ ಎಂದರು.
ಡಿಸಿಸಿ ಪ್ರಾದೇಶಿಕ ಕಚೇರಿ ಮಾಡುವ ಪ್ರಯತ್ನ ಮುಂದುವರಿದಿದೆ. ಆದರೆ, ಡಿಸಿಸಿ ಪ್ರತ್ಯೇಕ ಬ್ಯಾಂಕ್ ಮಾಡುವುದು ಸುಲಭದ ಕೆಲಸವಲ್ಲ. ಜಿಲ್ಲೆಯಲ್ಲಿ ಕಳೆದ 30 ವರ್ಷದ ಇತಿಹಾಸದಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಹಾಗಾಗಿ, ರಸ್ತೆಗಳು ಹಾಳಾಗಿವೆ. ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು. ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಕನಿಷ್ಠ 3ರಿಂದ 3.50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಎಸ್.ಆರ್.ಪಾಟೀಲ, ಸಂಜೀವಕುಮಾರ ನೀರಲಗಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net