ಶಿಗ್ಗಾಂವಿ ಟಿಕೆಟ್ ಕುರಿತು ಪಕ್ಷದ ತೀರ್ಮಾನವೇ ಅಂತಿಮ; ಸ್ಥಳೀಯರಿಗೆ ಅವಕಾಶ ಕುರಿತು ಚರ್ಚೆ; ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

25 Shivanand Patil
Published on

ಹಾವೇರಿ: ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಇಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ‘ಶಿಗ್ಗಾಂವಿ ಉಪ ಚುನಾವಣೆಗೆ ನನಗೇ ಟಿಕೆಟ್ ಆಗುತ್ತದೆ. ಅವರು ಹೇಳಿದ್ದಾರೆ, ಇವರು ಹೇಳಿದ್ದಾರೆ’ ಎಂದು ಯಾರೂ ಹೇಳಬಾರದು. ಪಕ್ಷದ ತೀರ್ಮಾನವೇ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ ಅವರು ನನಗೇ ಟಿಕೆಟ್ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟಿಕೆಟ್ ಕೇಳುವುದು ತಪ್ಪಲ್ಲ. ಆದರೆ ನನಗೇ ಆಗಿದೆ ಎಂದು ಯಾರೂ ಹೇಳಬಾರದು. ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕುರಿತು ಸಿಎಂ, ಡಿಸಿಎಂ ಬಳಿ ಚರ್ಚಿಸಲಾಗಿದೆ. ನಾನು ಉಪಚುನಾವಣೆಯಲ್ಲಿ ಕೆಲಸ ಮಾಡುವೆ. ಹಿಂದಿನಂತೆ ಭಿನ್ನಾಭಿಪ್ರಾಯಗಳಿಂದ ಸೋಲು ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕೆಲ ಮುಖಂಡರ ಹೊಂದಾಣಿಕೆಯೇ ಕಾರಣ ಎಂಬ ಮಾತು ನನ್ನ ಬಳಿ ಯಾರೂ ಹೇಳಿಲ್ಲ. ಹಾಗೇನಾದರೂ ಇದ್ದರೆ ಕಾರ್ಯಕರ್ತರು ನನಗೆ ಲಿಖಿತವಾಗಿ ಪತ್ರ ಕೊಡಲಿ ಎಂದರು.
ಜುಲೈ 2ರಂದು ನಡೆಯಲಿರುವ ಜಿಲ್ಲಾ ಕೆಡಿಪಿ ಪೂರ್ವ ತಯಾರಿ ಸಭೆಯನ್ನು ಇಂದು ನಡೆಸಲಾಯಿತು. ಜಿಲ್ಲೆಯಲ್ಲಿ ಡೆಂೆ ಪ್ರಕಣಗಳು ನಿಯಂತ್ರಣಕ್ಕೆ ಬಂದಿವೆ. ಸದ್ಯಕ್ಕೆ ಐದು ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಜೆಜೆಎಂ ಯೋಜನೆಗೆ ರಾಜ್ಯ ಸರ್ಕಾರವೂ ಶೇ.40ರಷ್ಟು ಅನುದಾನ ಕೊಡುತ್ತದೆ. ರೀಫಿಲ್ಲಿಂಗ್ ಮಾಡುವಲ್ಲಿ ಹಣಕಾಸಿನ ಕೊರತೆ ಉದ್ಭವಿಸುತ್ತಿದೆ. ಆ ಬಗ್ಗೆ ಚರ್ಚೆ ನಡೆದಿವೆ. ಜಿಲ್ಲೆಯಲ್ಲಿ ಶೇ.70ರಷ್ಟು ಕೆಲಸ ಆಗಿದೆ ಎಂದರು.
ಜೂನ್‌ನಲ್ಲಿ ಮಳೆ ಕೊರತೆಯಾಗಿದೆ. ಇನ್ನೊಂದು ವಾರದಲ್ಲಿ ಆಗಬಹುದು ಎಂಬ ನಿರೀಕ್ಷೆ ಇದೆ. ಕಾದು ನೋಡೋಣ. ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಲೇ ತಯಾರಿ ಮಾಡಲಾಗುತ್ತಿದೆ. ಹಾವೇರಿ ನಗರದ ಕುಡಿಯುವ ನೀರು, ಚರಂಡಿಯ ಸೂಕ್ತ ನಿರ್ವಹಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಾನು ಜಿಲ್ಲೆಯಿಂದ ಅಂತರ ಕಾಯ್ದುಕೊಂಡಿಲ್ಲ. ಬಾಗಲಕೋಟೆ ಕ್ಷೇತ್ರದ ಚುನಾವಣೆಯಲ್ಲಿ ನಿರತನಾಗಿದ್ದೆ. ಈ ಬಾರಿ ನೀತಿಸಂಹಿತೆ ಅತಿ ಹೆಚ್ಚು ದಿನ ಇತ್ತು. ಆದರೂ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ಇತರರಿದ್ದರು.
ತೈಲ ದರ ಎರಡು ರೂ. ಕಡಿಮೆ
ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಎರಡು ರೂ. ಬೆಲೆ ಕಡಿಮೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಏರಿಸಿದ್ದೇವೆ. ಹಾಲಿನ ದರ ಹೆಚ್ಚಿಸಲು ಮಂಡಳಿಯಿಂದ ಮೊದಲೇ ಬೇಡಿಕೆ ಇತ್ತು. ಹಾಗಾಗಿ ಹೆಚ್ಚಿಸಲಾಗಿದೆ. ಹಾವೇರಿ ಹಾಲು ಒಕ್ಕೂಟ ರೈತರಿಗೆ 2 ರೂ. ಪ್ರೋತ್ಸಾಹ ಧನ ಕಡಿತಗೊಳಿಸಿರುವ ವಿಚಾರ ಕುರಿತು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ಸಚಿವ ಶಿವಾನಂದ ಪಾಟೀಲರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net