

ಹಾವೇರಿ: ಉಮೇಶ ಸಮಿತಿ ವರದಿ ಆಧರಿಸಿ 2015ರಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬದವರಿಗೆ ನೀಡುವ ಪರಿಹಾರವನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅಲ್ಲಿಂದ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಪರಿಹಾರದ ಆಸೆಗಾಗಿ ಕೆಲವರು ರೈತ ಆತ್ಮಹತ್ಯೆ ಎಂದು ಎಫ್‌ಐಆರ್ ಮಾಡಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಇಂದು ನಿನ್ನೆಯದಲ್ಲ. ರಾಜ್ಯದಲ್ಲಿ 2020ರಲ್ಲಿ 500, 2021ರಲ್ಲಿ 595, 2022ರಲ್ಲಿ 651 ಹಾಗೂ 2023ರಲ್ಲಿ ಈವರೆಗೆ 412 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 2022-23ರಲ್ಲಿ 122 ಹಾಗೂ 2023-24ರಲ್ಲಿ 33 ಪ್ರಕರಣಗಳು ವರದಿಯಾಗಿವೆ ಎಂದರು.
ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ರೈತ ಆತ್ಮಹತ್ಯೆಯಲ್ಲ. ಕುಡಿದು ಸತ್ತವರು, ಹಾರ್ಟ್ ಅಟ್ಯಾಕ್ ಆದವರು ರೈತ ಆತ್ಮಹತ್ಯೆ ಎಂದು ದೂರು ಕೊಟ್ಟಿದ್ದಾರೆ. ಆದರೆ, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಿದೆ. ಪರಿಹಾರ ಸಿಗುತ್ತದೆ ಎಂಬ ಮನುಷ್ಯ ಸಹಜ ಆಸೆಯಿಂದೆ ಎಫ್‌ಐಆರ್‌ನಲ್ಲಿ ಹಾಗೆ ದಾಖಲಿಸುತ್ತಿದ್ದಾರೆ. ಉಪವಿಭಾಗಾಧಿಕಾರಿ (ಎಸಿ) ನೇತೃತ್ವದ ಸಮಿತಿ ನಿರ್ಣಯಿಸಿದರೆ ಮಾತ್ರ ರೈತ ಆತ್ಮಹತ್ಯೆ ಎಂದಾಗುತ್ತದೆ. ನಂತರವಷ್ಟೇ ವರದಿ ಮಾಡಿ ಎಂದು ಪತ್ರಕರ್ತರಿಗೆ ಮನವಿ ಮಾಡಿದರು.
ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೆ ಪರಿಹಾರ ವಿಳಂಬ ಮಾಡಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಬಳಿಯೂ ಅಂತಹ ಪ್ರಕರಣಗಳು ಬಂದಿವೆ. ಕೆಲ ರೈತ ಮುಖಂಡರು, ಸಂಘಟನೆಯವರು ಪರಿಹಾರದ ಆಸೆಗೆ ಬಿದ್ದು ಅದೇ ರೀತಿ ಎಫ್‌ಐಆರ್ ದಾಖಲಿಸುತ್ತಾರೆ. ಈ ಬಗ್ಗೆ ಪರಿಶೀಲಿಸಲು ಎಸ್ಪಿಗೆ ಹೇಳಿದ್ದೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶೀವಣ್ಣನವರ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಎಸ್‌ಪಿ ಶಿವಕುಮಾರ ಗುಣಾರೆ, ಜಿಪಂ ಸಿಇಒ ಅಕ್ಷಯ ಶ್ರೀಧರ, ಇತರರಿದ್ದರು.
ಶಾಸಕರಿಗೆ ಸಿಎಂ ಸೂಚನೆ
ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಕಡಿಮೆಯಾಗಬೇಕು ಎಂಬ ಕಾರಣಕ್ಕೆ ಸಿಎಂ ಇಲ್ಲೇ ಮೊದಲ ಸಭೆ ನಡೆಸಿದ್ದರು. ರೈತರಿಗೆ ನೀವು ಸಹಾಯ ಮಾಡಿ ಎಂದು ಸಿಎಂ ಮೌಖಿಕವಾಗಿ ಸ್ಥಳೀಯ ಶಾಸಕರಿಗೆ ಆದೇಶ ಮಾಡಿದ್ದಾರೆ. ಪರಿಹಾರ ಸಿಗದವರಿಗೆ ಪರಿಹಾರ ಕೊಡಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಸರ್ಕಾರ ನಿರ್ಧರಿಸಿದರೆ ಮಾತ್ರ ಮೋಡ ಬಿತ್ತನೆ
ರಾಜ್ಯದ 196 ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳನ್ನು ಸೇರಿಸಲಾಗಿದೆ. ಸರ್ಕಾರ ನಿರ್ಣಯಿಸಿದರೆ ಮಾತ್ರ ಎಲ್ಲೆಡೆ ಮೋಡ ಬಿತ್ತನೆ ಮಾಡಲಾಗುವುದು. ಮೋಡ ಬಿತ್ತನೆ ಬೇಡ ಎಂದು ಸ್ವತಃ ಸಿಎಂ ಹೇಳಿರುವಾಗ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.