ಬಿಜೆಪಿಗೆ ಹೋಗುವ ಮನಸ್ಸಿದ್ದರೆ ತಡೆಯಲು ಆಗಲ್ಲ; ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ಕುರಿತು ಮಾರ್ಮಿಕವಾಗಿ ನುಡಿದ ಸತೀಶ ಜಾರಕಿಹೊಳಿ

Satish Jarakiholi
Published on

ಹಾವೇರಿ: ಜಗದೀಶ ಶೆಟ್ಟರ್ ಈಗ ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಮುಂದೆ ಯಾರು ಹೋಗುತ್ತಾರೋ ಗೊತ್ತಿಲ್ಲ. ಹೋಗುವ ಮನಸ್ಸು ಇದ್ದರೆ ತಡೆಯಲು ಆಗುವುದಿಲ್ಲ. ಆದರೆ, ಎಲ್ಲರೂ ಇರುತ್ತಾರೆ ಎಂಬ ಆಶಾಭಾವನೆ ನಮ್ಮದು ಎಂದು ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಅಂದರೆ ಬಿಜೆಪಿಯಿಂದ ಯಾಕೆ ಶೆಟ್ಟರ್ ಕಾಂಗ್ರೆಸ್‌ಗೆ ಬಂದಿದ್ದರು ಎಂದು ಪ್ರಶ್ನಿಸಿದರು. ಜಗದೀಶ ಶೆಟ್ಟರ್ ಬೆಳಗಾವಿಯಲ್ಲಿ ಸ್ಫರ್ಧಿಸುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು. ಬಿಜೆಪಿಯವರು ಯಾರು ಬೇಕಾದರೂ ಸ್ಪರ್ಧಿಸಲಿ. ಶೆಟ್ಟರ್, ಜಾರಕಿಹೊಳಿ ಒಬ್ಬರಿಂದ ಚುನಾವಣೆ ನಿರ್ಣಾಯಕ ಆಗುವುದಿಲ್ಲ. ಪಕ್ಷ ಮುಖ್ಯ. ಲಿಂಗಾಯತ ಮತಗಳು ಇಭ್ಬಾಗವಾಗುವ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ ನೋಡೋಣ. ಯಾರು ಯಾವ ಕಡೆ ಆಗುತ್ತಾರೆ ಎಂದು ಹೇಳಿದರು.
ರಾಮ ಮಂದಿರ ಉದ್ಘಾಟನೆ ಚುನಾವಣೆ ಮೇಲೆ ಅಂತಹ ಪರಿಣಾಮ ಬೀರಲ್ಲ. ನಮಗೆ ನಮ್ಮದೇ ಆದ ಮತ ಬ್ಯಾಂಕ್ ಇದೆ. ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಗೆದ್ದಿದ್ದೇವೆ ಎಂದರು.
ನಾನು ಪವರ್ ಸೆಂಟರ್ ಅಲ್ಲ
ಸಮಾನ ಮನಸ್ಕರು ಕೂಡಿದ್ದೇವೆ ಅಷ್ಟೇ. ನಾನೇನು ಪವರ್ ಸೆಂಟರ್ ಎಂದು ಹೇಳುವುದಿಲ್ಲ. ಪಕ್ಷದಲ್ಲೇ ಇದ್ದೇವೆ. ಹೊರಗಡೆ ಏನು ಹೋಗಿಲ್ಲ. ಡಿಸಿಎಂ ಕುರಿತು ಸದ್ಯಕ್ಕೆ ಬೇಡಿಕೆ ಇಲ್ಲ. ಚುನಾವಣೆಗೆ ಫೋಕಸ್ ಮಾಡುತ್ತಿದ್ದೇವೆ. ಸದ್ಯಕ್ಕಂತೂ ಅದರ ಅವಶ್ಯಕತೆ ಇಲ್ಲ. ಚುನಾವಣೆ ಬಳಿಕ ಕೇಳೋಣ. ಮತ್ತೊಂದು ಸರಿ ಕೇಳುತ್ತೇನೆ. ನಮ್ಮ ಹೈಕಮಾಂಡ್ ಇದೆ. ಅವರೊಂದಿಗೆ ಚರ್ಚಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net