ಈ ಚುನಾವಣೆ ಸುಳ್ಳು- ಸತ್ಯದ ನಡುವಿನ ಚುನಾವಣೆ; ಪ್ರಧಾನಿ ಮೋದಿ ಅವರ 10 ವರ್ಷದ ಸಾಧನೆ ಏನು; ಸಚಿವ ಸಂತೋಷ ಲಾಡ್ ಪ್ರಶ್ನೆ

Santosh lad
Published on

ಹಾವೇರಿ: ಈ ಚುನಾವಣೆ ನ್ಯಾಯ - ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಚುನಾವಣೆ. ಅಂಬೇಡ್ಕರ್ ಸಂವಿಧಾನ ಉಳಿಸುವ ಚುನಾವಣೆಯಾಗಿದೆ. ನಾವು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳಿದ್ದೇವೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಜಾತಿ, ಧರ್ಮದ ಮಾತು ಬಿಟ್ಟು ಅವರ 10 ವರ್ಷಗಳ ಸಾಧನೆಯನ್ನು ಹೇಳಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸವಾಲು ಎಸೆದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ, ಮುಸ್ಲಿಂಮರ ವಿರುದ್ಧ ಮಾತನಾಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಇದೇನಾ ಎಂದು ಜರಿದರು. ಡಿಗ್ರಿ ಓದಿರುವ ಶೇ.65ರಷ್ಟು ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತಿಲ್ಲ. ಚೀನಾ ಸೇನೆ ಭಾರತದ ಗಡಿಯೊಳಗೆ ಬಂದಿದೆ. 2019ರಲ್ಲಿ ಪುಲ್ವಾಮಾದಲ್ಲಿ 300 ಕೆಜಿ ಆರ್‌ಡಿಎಕ್ಸ್ ಎಲ್ಲಿಂದ ಬಂತು. ಈ ಬಗ್ಗೆ ಚರ್ಚೆಯಾಗಬೇಕಲ್ಲವೇ ? ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವವರು ಬೀಫ್ ಎಕ್ಸ್‌ಫೋರ್ಟ್ ನಿಲ್ಲಿಸಿದ್ದಾರಾ ? ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಅದಾನಿ, ಅಂಬಾನಿಗೆ ಅಷ್ಟು ಆಸ್ತಿ ಹೇಗೆ ಬಂತು ? 6 ವರ್ಷದಲ್ಲಿ 11 ಲಕ್ಷ ಕೋಟಿ ಹೇಗೆ ಗಳಿಸಿದರು ? ಎಂದು ಪ್ರಶ್ನಿಸಿದರು.
ನೀತಿ ಆಯೋಗದ ಪ್ರಕಾರ 13,013 ಹೆಣ್ಣು ಮಕ್ಕಳು ಒಂದು ವರ್ಷಕ್ಕೆ ಕಾಣೆಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಚಕಾರ ಎತ್ತುತ್ತಿಲ್ಲ. ನೇಹಾ ಪ್ರಕರಣವನ್ನು ನಾವೆಲ್ಲರೂ ಖಂಡಿಸಿದ್ದೇವೆ. ಬಿಜೆಪಿಯ ಎಲ್ಲರೂ ಆಕೆಯ ಮನೆಗೆ ಹೋದರು. ಬೇರೆ ಪ್ರಕರಣಗಳಲ್ಲಿ ಯಾಕೆ ಹೋಗಲಿಲ್ಲ. ಚುನಾವಣೆ ಬಳಿಕ ಅವರ ಮನೆಗೆ ಎಷ್ಟು ಜನ ಹೋಗುತ್ತಾರೆ ನೋಡೋಣ ಎಂದರು.
ನಮ್ಮ ಸರ್ಕಾರದ ಸಾಧನೆಯಿಂದಾಗಿ ಈ ಬಾರಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಖಚಿತ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ವಿನೋದ ಅಸೂಟಿ, ಎಂ.ಎಂ.ಹಿರೇಮಠ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ಇತರರಿದ್ದರು.
ಮೋದಿ- ರಾಹುಲ್ ಸಂವಾದ ಮಾಡಲಿ
ಪ್ರಧಾನಿ ಅಭ್ಯರ್ಥಿ ಯಾರೆಂದು ನಾವು ಘೋಷಿಸಿಲ್ಲ ನಿಜ. ನಮ್ಮ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ 10 ವರ್ಷದಲ್ಲಿ 111 ಬಾರಿ ಸುದ್ದಿಗೋಷ್ಠಿ ಮಾಡಿದ್ದರು. ಆದರೆ, ನಿಮ್ಮ ಪ್ರಧಾನಿ ಮೋದಿ ಒಂದೇ ಒಂದು ಬಾರಿ ಸುದ್ದಿಗೋಷ್ಠಿ ಮಾಡಲಿಲ್ಲ. ನಟ ಅಕ್ಷಯ ಕುಮಾರ ಜತೆ ಸಂದರ್ಶನ ಮಾಡುತ್ತಾರೆ. ಅವರು ನೀವು ಮಾವು ಹೇಗೆ ತಿನ್ನುತ್ತೀರಿ ಎಂದು ಪ್ರಶ್ನೆ ಕೇಳುತ್ತಾರೆ. ಅಮೆರಿಕ ಮಾದರಿಯಲ್ಲಿ ಮೋದಿ- ರಾಹುಲ್ ಇಬ್ಬರನ್ನೂ ಒಟ್ಟಿಗೆ ಕುಳಿತು ಸಂವಾದ ಮಾಡಲು ಒಪ್ಪಲಿ ಎಂದು ಲಾಡ್ ಸವಾಲು ಎಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net