

ಹಾವೇರಿ: ಬೇಸಿಗೆ ಕುಡಿಯುವ ನೀರಿನ ಕಷ್ಟ ಬಂದಾಗ ತಕ್ಷಣ ಸ್ಪಂದಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಪೂರೈಕೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.
ಹಾವೇರಿ ನಗರಕ್ಕೆ 24/7 ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಒಳಗೊಂಡಂತೆ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ಒಂದು ತಿಂಗಳೊಳಗಾಗಿ ಸರಿಪಡಿಸಿ, 15 ದಿನಕ್ಕೊಮ್ಮೆ ನೀರು ಪೂರೈಕೆ ಕೈಬಿಟ್ಟು, ಕನಿಷ್ಠ ಐದು ದಿನಕ್ಕೊಮ್ಮೆ ನೀರು ಕೊಡಲೇಬೇಕು. ಈಗಾಗಲೇ 32 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೂ ಕಾಮಗಾರಿ ಪೂರ್ಣವಾಗಿಲ್ಲ. ಜನ ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಕಾಲಾವಕಾಶ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ನೀರಿನ ಸರಬರಾಜು ಜಾಲ ಹಾಗೂ ಹೊಸ ನೀರು ಪೂರೈಕೆ ಪೈಪ್‌ಲೈನ್ ತಾಂತ್ರಿಕ ಸಮಸ್ಯೆಗಳ ಕುರಿತಾಗಿ ಎರಡು ದಿನದೊಳಗಾಗಿ ಜಲಮಂಡಳಿ ಅಧಿಕಾರಿಗಳು, ಕೆಯುಐಡಿಎಫ್‌ಸಿ, ಎನ್.ಕೆ.ಯು.ಎಸ್.ಐ.ಟಿ. ಕೋಶ ಹಾಗೂ ನಗರಸಭೆ ಅಭಿಯಂತರರು ಜಂಟಿಯಾಗಿ ಪರಿಶೀಲನೆ ನಡೆಸಿ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.
ಉಳಿದಂತೆ ಒಂಭತ್ತು ಪಟ್ಟಣಗಳ ಕುಡಿಯುವ ನೀರಿನ ಮೂಲ, ವಿತರಣೆ ಜಾಲ, ಹೊಸ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಬಂಕಾಪುರ ಹೊರತುಪಡಿಸಿ ಉಳಿದ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನೋಡೆಲ್ ಅಧಿಕಾರಿ ನೇಮಿಸಿ
ರಾಣೆಬೆನ್ನೂರ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ನೀರು ಪೂರೈಕೆಗೆ ಅಳವಡಿಸಿಕೊಂಡಿರುವ ಮಾದರಿಯನ್ನು ಹಾವೇರಿಯಲ್ಲಿ ಅನುಸರಿಸಿ. ಪ್ರತಿ ಒಎಚ್‌ಟಿಗೆ ಓರ್ವ ನೋಡಲ್ ಅಧಿಕಾರಿ ನೇಮಿಸಿ, ವಾಲ್‌ಮನ್‌ಗಳನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಿ. ಒಂದು ತಿಂಗಳೊಳಗಾಗಿ ಐದು ದಿನಕ್ಕೊಮ್ಮೆ ನೀರು ಕೊಡದಿದ್ದರೆ ಕಳೆದ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಎಲ್ಲ ನಗರಸಭೆ ಇಂಜನಿಯರ್‌ಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು.