9 ಕೈ ಶಾಸಕರ ಆಪರೇಶನ್‌ಗೆ ಕಮಲ ಯತ್ನ; ಸಿಎಂ, ಡಿಸಿಎಂ ಎದುರು ಶಾಸಕರೇ ಹೇಳಿಕೊಂಡಿದ್ದಾರೆ; ಸಚಿವ ಎನ್.ಎಸ್.ಭೋಸರಾಜು ಸ್ಪೋಟಕ ಹೇಳಿಕೆ

NS Bhosaraju
Published on

ಹಾವೇರಿ: ಬಿಜೆಪಿಯವರು ಆಪರೇಶನ್ ಕಮಲದ ಭಾಗವಾಗಿ 9 ಶಾಸಕರನ್ನು ಸಂಪರ್ಕಿಸಿರುವ ಬಗ್ಗೆ ನಮ್ಮ ಶಾಸಕರೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಬಳಿ ಹೇಳಿಕೊಂಡಿದ್ದಾರೆ ಎಂದು ಸಚಿವ ಎನ್.ಎಸ್.ಭೋಸರಾಜು ಸ್ಪೋಟಕ ಹೇಳಿಕೆ ನೀಡಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿರುವುದು ಶೇ.100ರಷ್ಟು ಸತ್ಯ. ಇದರಲ್ಲಿ ಯಾವ ಅನುಮಾನವೇ ಇಲ್ಲ ಎಂದು ಹೇಳಿದರು.
ಸಿಎಂ ಕುರ್ಚಿಗೆ ಸತೀಶ ಜಾರಕಿಹೊಳಿ, ಆರ್.ವಿ.ದೇಶಪಾಂಡೆ ಲಾಬಿ ವಿಚಾರದ ಕುರಿತು ಉತ್ತರಿಸಿದ ಅವರು, ಸತೀಶ ಜಾರಕಿಹೊಳಿ ಇಲಾಖೆಯ ವಿಷಯವಾಗಿ ದೆಹಲಿಗೆ ಹೋಗಿದ್ದಾರೆ. ಸಹಜವಾಗಿ ಅಲ್ಲಿ ಹೋದಾಗ ಗೌರವಸೂಚಕವಾಗಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಜಾರಕಿಹೊಳಿಯವರು ಅಲ್ಲಿ ಹೋಗಿದ್ದು ಬೇರೆ ವಿಶೇಷ ಏನಿಲ್ಲ. ದೇಶಪಾಂಡೆಯವರು ಒಂಬತ್ತು ಬಾರಿ ಶಾಸಕರಾಗಿದ್ದಾರೆ. ಮಿನಿಸ್ಟರ್ ಆಗಿದ್ದೇನೆ ಮುಂದೆ ಸಿದ್ದರಾಮಯ್ಯ ಒಪ್ಪಿದರೆ ಸಿಎಂ ಆಗುತ್ತೇನೆಂದು ಸಹಜವಾಗಿ ಹೇಳಿದ್ದಾರೆ. ನಮ್ಮ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ. ಹೈಕಮಾಂಡ್ ಹಾಗೂ ಸಚಿವರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪರವಾಗಿ ಇದ್ದೇವೆ ಎಂದರು.
ಇದು ತಂದೆ- ಮಗನ ಆಟ :
_
ಲೋಕಸಬಾ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಆತಂಕ ಶುರುವಾಗಿದೆ. ಚುನಾವಣೆ ಬಳಿಕ ಮೋದಿಯವರ ಪ್ರಭಾವ ಶೇ.8ರಷ್ಟು ಕಡಿಮೆಯಾಗಿದೆ. ರಾಹುಲ್ ಗಾಂಧಿ ಪ್ರಭಾವ ಶೇ.22ರಷ್ಟು ಹೆಚ್ಚಾಗಿದೆ. ನಾವು ನೀವು ಇಲ್ಲಿ 28 ಸೀಟು ಗೆಲ್ಲುತ್ತೆವೆ. ಬಳಿಕ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯವುದು ನಮ್ಮ ಜವಾಬ್ದಾರಿ ಎಂದು ತಂದೆ-ಮಗ ಅಮಿತ್ ಶಾಗೆ ಹೇಳಿ ಬಂದಿದ್ದರು. ಅದಕ್ಕೆ ಕುಮಾರಸ್ವಾಮಿ ಅವರನ್ನು ಮಂತ್ರಿ ಮಾಡಿದ ಮೇಲೆ ದೇವೆಗೌಡರ ಪ್ರಯೋಗ ಇಲ್ಲಿ ನಡೆಯುತ್ತಿದೆ. ಮಾತು ಕೊಟ್ಟ ಬಂದ ಮೇಲೆ ಈ ರೀತಿ ಒಂದೊಂದಾಗಿ ಮಾಡುತ್ತಿದ್ದಾರೆ. ಯಾರಿಂದಲೂ ಸರ್ಕಾರ ಅಳ್ಳಾಡಿಸೋಕೆ ಸಾಧ್ಯವೇ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net