ಕೇವಲ ಸೆಕ್ಸ್ ಸ್ಕಾೃಮ್ ಅಲ್ಲ ರೇಪ್‌ಗೆ ಸಮ; ಪ್ರಜ್ವಲ್ ರೇವಣ್ಣ ಕೇಸ್ ಕುರಿತು ಸಚಿವ ಕೃಷ್ಣಭೈರೆಗೌಡ ಕಿಡಿನುಡಿ

Published on

ಹಾವೇರಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಬಲ್ಯ ಆರೋಪ ಪ್ರಕರಣವನ್ನು ಸೆಕ್ಸ್ ಸ್ಕಾೃಮ್ ಎಂದು ಕರೆಯಬೇಡಿ. ಇದು ರೇಪ್‌ಗೆ ಸಮನಾದ ಪ್ರಕರಣ. ಸೆಕ್ಸ್ ಸ್ಕಾೃಮ್‌ಗೂ ಮೀರಿದ ಪ್ರಕರಣ. ಅಮಾಯಕರ ದುರ್ಲಾಭ ಪಡೆದಿರುವ ಪ್ರಕರಣ ಎಂದು ಕಂದಾಯ ಸಚಿವ ಕೃಷ್ಣಭೈರೆಗೌಡ ಆಕ್ರೋಶಭರಿತವಾಗಿ ನುಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ, ಮರ್ಯಾದೆ ಇದೆಯಾ ಇಲ್ವಾ ?ಹಿಂದು ಮಹಿಳೆಯರ ತಾಳಿಯ ಬಗ್ಗೆ ಮಾತನಾಡುತ್ತೀರಿ. ‘ಪ್ರಜ್ವಲ್ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆತನಿಗೆ ಟಿಕೆಟ್ ಕೊಡಬಾರದು’ ಎಂದು ಹಾಸನದ ಬಿಜೆಪಿ ಲೀಡರ್ ಡಿಸೆಂಬರ್‌ನಲ್ಲೇ ಪತ್ರ ಬರೆದಿದ್ದರು. ಆದರೂ ಬಿಜೆಪಿಯವರು ಅವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಕುಟುಕಿದರು.
ಪ್ರಧಾನಮಂತ್ರಿಗಳು ಹಿಂದು ಮಹಿಳೆಯರ ಬಗ್ಗೆ ಮಾತನಾಡುವವರು ಇಲ್ಲಿ ಇಷ್ಟೊಂದು ಹಿಂದು ಮಹಿಳೆಯರ ಮಾನಭಂಗವಾಗಿದೆ. ಹಲವು ಮನೆಗಳನ್ನು ಒಡೆದಿದ್ದಾರೆ. ಮಾಂಗಲ್ಯ ಕಿತ್ತುಕೊಂಡಿದ್ದಾರೆ. ಇದೆಲ್ಲ ಗೊತ್ತಿದ್ದರೂ ಅಲ್ಲೇ ಬಂದು ಮೋದಿ ಭಾಷಣ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ಕೊಡುವ ಒಂದೊಂದು ಮತ ಮೋದಿಗೆ ಕೊಡುವ ಮತ ಎಂದು ಭಾಷಣ ಮಾಡಿದ್ದಾರೆ. ಪ್ರಜ್ವಲ್ಗೆ ಮೋದಿಯವರು ನೇರವಾಗಿ ಬೆಂಬಲ ಕೊಟ್ಟಿದ್ದಾರೆ ಎಂದರು.
ಇಲ್ಲಿಯವರೆಗೆ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ. ನಿಮಗೆ ನಾಚಿಕೆ ಮಾನ, ಮರ್ಯಾದೆ ಇಲ್ವಾ ? ಎಸ್‌ಐಟಿ ಮಾಡಿದ್ದು ರಾಜಕೀಯ ಪ್ರೇರಿತ ಅಂತಾರೆ. ಹಾಗಾದರೆ, ಈ ಪ್ರಕರಣ ಮುಚ್ಚಿ ಹಾಕಬೇಕಾ ? ನಾನು ಚಾಲೆಂಜ್ ಮಾಡುತ್ತೇನೆ. ಇದು ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ಪ್ರಪಂಚದಲ್ಲಿ ಇಷ್ಡು ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿಲ್ಲ. ಇದರ ಬಗ್ಗೆ ಯಾಕೆ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ ಎಂದು ಕಿಡಿಕಾರಿದರು.
ಮೋದಿಯವರ ಹತ್ತಿರ ಸಿಬಿಐ, ಇಡಿ ಇದೆ. ದೇಶ ಬಿಟ್ಟು ಹೋಗಲು ಇವರನ್ನು ಹೇಗೆ ಬಿಟ್ಟರು. ನೀರವ್ ಮೋದಿ, ಲಲಿತ ಮೋದಿ, ವಿಜಯ ಮಲ್ಯ ಹೊರಗಡೆ ಹೋಗಿದ್ದಾರೆ. ಇವರ ಹಾಗೆ ಇವರನ್ನು ಹೊರಗಡೆ ಕಳುಹಿಸಿ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ದೇಶಕ್ಕೆ ಅವಮಾನ ಮಾಡುವ ಕೆಲಸವನ್ನು ಬಿಜೆಪಿ- ಜೆಡಿಎಸ್‌ನವರು ಮಾಡಿದ್ದಾರೆ ಎಂದರು.
ಕ್ಷೇತ್ರದ ಉಸ್ತುವಾರಿ
ಹಾವೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನನಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಕೆಲಸ ಮಾಡಲು ಬಂದಿದ್ದೇನೆ. ಕ್ಷೇತ್ರದಲ್ಲಿ ಈ ಸಲ ಗೆಲ್ಲುವ ಅವಕಾಶವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ಬಿಜೆಪಿ ಸಾಕು ಎನ್ನುವ ಅಭಿಪ್ರಾಯಕ್ಕೆ ಜನ ಬಂದಿದ್ದಾರೆ. ರೈತರು ಬೇಸತ್ತು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಬದಲಾವಣೆ ಗಾಳಿ ಬೀಸಿದೆ ಎಂದು ಸಚಿವ ಕೃಷ್ಣಭೈರೆಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net